ಲಸಿಕೆ ನೋಂದಣಿ ಆರಂಭವಾಗುತ್ತಿದ್ದಂತೆಯೇ ಕೋವಿನ್, ಆರೋಗ್ಯಸೇತು ಪೋರ್ಟಲ್ ಸ್ತಬ್ಧ!

ಹೊಸದಿಲ್ಲಿ: ದೇಶದ 18ರಿಂದ 45 ವರ್ಷ ವಯಸ್ಸಿನವರು ಬುಧವಾರ ಸಂಜೆ ಕೋವಿಡ್ ಲಸಿಕೆಗೆ ತಮ್ಮ ಹೆಸರನ್ನು ನೋಂದಾಯಿಸಲು ಮುಗಿಬಿದ್ದ ಕಾರಣ ಕೋವಿನ್ ಪೋರ್ಟಲ್ ಹಾಗೂ ಆರೋಗ್ಯ ಸೇತು ಆ್ಯಪ್ ಸ್ಥಗಿತಗೊಂಡಿವೆ.
18 ವರ್ಷ ಮೇಲ್ಮಟ್ಟ ದೇಶದ ಎಲ್ಲ ಜನರಿಗೆ ಮೇ 1ರಂದು ಕೋವಿಡ್ ವಿರುದ್ಧ ಲಸಿಕೆ ನೀಡಲು ಆರಂಭಿಸಲಾಗುವುದು ಎಂದು ಕೇಂದ್ರ ಸರಕಾರ ಈಗಾಗಲೇ ಘೋಷಿಸಿತ್ತು. 18 ವರ್ಷಕ್ಕಿಂತ ಮೇಲ್ಮಟ್ಟ ಅರ್ಹರು ಕೋವಿಡ್ ವಿರುದ್ದ ಲಸಿಕೆ ಪಡೆಯಲು ತಮ್ಮ ಹೆಸರನ್ನು ಬುಧವಾರ ಸಂಜೆ 4ಕ್ಕೆ ಪೋರ್ಟಲ್ ಹಾಗೂ ವೆಬ್ ಸೈಟ್ ನಲ್ಲಿ ನೋಂದಾಯಿಸಬಹುದು ಎಂದು ಸರಕಾರ ತಿಳಿಸಿತ್ತು.
ಹೆಸರು ನೋಂದಾವಣೆ ಆರಂಭವಾದ ಕೆಲವೇ ಹೊತ್ತಿನ ಬಳಿಕ ಹಲವು ಜನರು ತಮಗೆ ಕೋವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಆ್ಯಪ್ ಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಲಾರಂಭಿಸಿದ್ದಾರೆ. ಹಲವರು ಸಾಮಾಜಿಕ ತಾಣದಲ್ಲಿ ಸ್ತಬ್ದವಾಗಿರುವ ಪೇಜ್ ಗಳ ಸ್ಟ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ.
ನಾವು ಪೋನ್ ನಂಬರ್ ನಮೂದಿಸಿದ ಬಳಿಕ ಒಟಿಪಿ ಸಂಖ್ಯೆ ಬರಲಿಲ್ಲ. ಯಶಸ್ವಿಯಾಗಿ ಲಾಗಿನ್ ಆದ ಬಳಿಕ ನಮ್ಮ ವಿವರಗಳನ್ನು ತುಂಬಿಸಲು ಸಾಧ್ಯವಾಗಲಿಲ್ಲ ಎಂದು ಕೆಲವರು ದೂರುತ್ತಿದ್ದಾರೆ.
ಕೆಲವರು ಲಾಗಿನ್ ಆದ ಬಳಿಕ 18ರಿಂದ 45 ವರ್ಷ ವಯಸ್ಸಿನವರಿಗೆ ಲಸಿಕೆ ಲಭ್ಯವಿಲ್ಲ ಎಂದು ಆ್ಯಪ್ ನಲ್ಲಿ ತೋರಿಸುತ್ತಿದೆ ಎಂದು ವರದಿಯಾಗಿದೆ.







