ಪಂಚತಾರ ಹೋಟೆಲಿನಲ್ಲಿ ನ್ಯಾಯಾಧೀಶರಿಗೆ ಕೋವಿಡ್ ಕೇರ್ ಸೆಂಟರ್: ಆದೇಶ ವಾಪಸ್ ಪಡೆದ ಸರಕಾರ
ನಮ್ಮನ್ನು ಓಲೈಸಲು ಹೀಗೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ ನ್ಯಾಯಾಧೀಶರು

ಹೊಸದಿಲ್ಲಿ: ಬಹಳಷ್ಟು ಟೀಕೆಗಳ ನಂತರ ದಿಲ್ಲಿಯ ಪಂಚತಾರ ಅಶೋಕ ಹೋಟೆಲ್ ಅನ್ನು ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶರುಗಳು, ಅಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರುಗಳಿಗಾಗಿ ಕೋವಿಡ್ ಆರೈಕೆ ಕೇಂದ್ರವನ್ನಾಗಿಸುವ ನಿರ್ಧಾರದಿಂದ ದಿಲ್ಲಿ ಸರಕಾರ ಹಿಂದೆ ಸರಿದಿದೆ.
ಇಂತಹ ಒಂದು ಸೌಲಭ್ಯವನ್ನು ಒದಗಿಸುವಂತೆ ತಾನು ಹೇಳಿಲ್ಲ ಎಂದು ದಿಲ್ಲಿ ಹೈಕೋರ್ಟಿನ ಪೀಠ ಗುರುವಾರ ಹೇಳಿ ದಿಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಸರಕಾರ ತನ್ನ ನಿರ್ಧಾರ ವಾಪಸ್ ಪಡೆದಿದೆ.
ದಿಲ್ಲಿಯ ಹಲವೆಡೆ ಕೋವಿಡ್ ರೋಗಿಗಳು ಆಸ್ಪತ್ರೆಗಳಲ್ಲಿ ದಾಖಲಾಗಲು ಹಾಗೂ ಆಕ್ಸಿಜನ್ ಸೌಲಭ್ಯ ಪಡೆಯಲು ವಸ್ತುಶಃ ಪರದಾಡುತ್ತಿರುವಾಗ ನ್ಯಾಯಾಧೀಶರುಗಳಿಗೆ ಇಂತಹ ಸೌಲಭ್ಯ ಒದಗಿಸಲು ಮುಂದಾದ ಸರಕಾರದ ಕ್ರಮ ವ್ಯಾಪಕ ಚರ್ಚೆಗೀಡಾಗಿತ್ತು.
ಈ ಕುರಿತ ಮಾಧ್ಯಮ ವರದಿಗಳನ್ನು ಪರಿಗಣಿಸಿ ಸ್ವಯಂಪ್ರೇರಣೆಯಿಂದ ಪ್ರಕರಣ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ವಿಪಿನ್ ಸಂಧಿ ಹಾಗೂ ರೇಖಾ ಪಾಟೀಲ್ ಅವರನ್ನೊಳಗೊಂಡ ಪೀಠ "ನೀವು ಏನನ್ನು ಹೇಳಲು ಬಯಸುತ್ತಿದ್ದೀರಿ? ನಮ್ಮನ್ನು ಓಲೈಸಲು ಹೀಗೆ ಮಾಡುತ್ತಿದ್ದೀರಾ?" ಎಂದು ಪ್ರಶ್ನಿಸಿದೆ.
"ಅಗತ್ಯವಿರುವವರಿಗೆ ನೀಡಲು ನಿಮ್ಮಲ್ಲಿ ಆಕ್ಸಿಜನ್ ಇಲ್ಲ ಆದರೆ ನೀವು ನಮಗೆ 100 ಬೆಡ್ ನೀಡುತ್ತಿದ್ದೀರಿ. ಇಂತಹ ಆದೇಶಗಳನ್ನು ನೀಡುವುದನ್ನು ನಿಲ್ಲಿಸಿ" ಎಂದು ನ್ಯಾಯಾಲಯ ಹೇಳಿದೆ.







