ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಲಸಿಕೆಗಾಗಿ ಮುಗಿಬಿದ್ದ ಜನ
ಲಸಿಕೆ ಕೊರತೆ ವಿರುದ್ಧ ತೀವ್ರ ಆಕ್ರೋಶ: ಗದ್ದಲ, ಗೊಂದಲದ ವಾತಾವರಣ

ಉಡುಪಿ, ಎ.28: ಕೋವಿಡ್ ಎರಡನೇ ಅಲೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಬುಧವಾರ ಬೆಳಗ್ಗೆಯಿಂದ ಉಡುಪಿ ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಲಸಿಕೆ ಕೊರತೆಯಿಂದ ಟೋಕನ್ ಸಿಗದ ಕಾರಣ ಕೆಲಕಾಲ ಗದ್ದಲ ಹಾಗೂ ಗೊಂದಲ ಉಂಟಾಯಿತು.
ಕಳೆದ ಕೆಲವು ದಿನಗಳಿಂದ ಕೊರೋನ ಲಸಿಕೆಯ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಎರಡು ದಿನಗಳಿಂದ ಲಸಿಕೆ ನೀಡುವ ಕಾರ್ಯವನ್ನು ಸ್ಥಗಿತ ಗೊಳಿಸಲಾಗಿತ್ತು. ಇದರಿಂದ ಸಾಕಷ್ಟು ಮಂದಿ ಲಸಿಕೆಗಾಗಿ ಹಲವು ಬಾರಿ ಅಲೆದಾಡ ನಡೆಸಿದ್ದರು. ಇದೀಗ ಜಿಲ್ಲೆಗೆ 12,000 ಡೋಸ್ ಕೋವಿಶೀಲ್ಡ್ ಲಸಿಕೆ ಆಗಮಿಸಿದ್ದು, ಜಿಲ್ಲಾಸ್ಪತ್ರೆಗೆ 200 ಡೋಸ್‌ಗಳನ್ನು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಇಂದು ಬೆಳಗ್ಗೆಯಿಂದ ಲಸಿಕೆ ನೀಡುವ ಕೆಲಸ ಆರಂಭಿಸಲಾಗಿತ್ತು. ಬೆಳಗ್ಗೆ 8ಗಂಟೆಗೆಯೇ ನೂರಾರು ಸಂಖ್ಯೆಯಲ್ಲಿ ಜನ ಲಸಿಕೆಗಾಗಿ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ್ದರು. ಆದರೆ ಎ.27ರಂದು ಟೋಕನ್ ಪಡೆದ 130 ಮಂದಿಗೆ ಮಾತ್ರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಲಸಿಕೆ ನೀಡಲಾಯಿತು. ಉಳಿದ ಡೋಸ್ ನೀಡಲು ಕೆಲವರಿಗೆ ಟೋಕನ್ ನೀಡಿ ಮಧ್ಯಾಹ್ನ ನಂತರ ಬರಲು ತಿಳಿಸಲಾಯಿತು.
ಆದರೆ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಜನ ಟೋಕನ್ ಗಾಗಿ ಗಲಾಟೆ ಮಾಡಿದರು. ಲಸಿಕೆ ಕೊರತೆಯ ಬಗ್ಗೆ ಸರಕಾರ ಮತ್ತು ಅಧಿಕಾರಿ ಗಳ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಆಸ್ಪತ್ರೆಯ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು. ಈ ಮಧ್ಯೆ ನಾಳೆಗೆ ಕೇವಲ 200 ಮಂದಿಗೆ ಟೋಕನ್ ನೀಡಿ ಕಳುಹಿಸಲಾಯಿತು. ಟೋಕನ್ ಸಿಗದೆ ಹೆಚ್ಚಿನವರು ನಿರಾಸೆಯಿಂದ ವಾಪಾಸ್ಸಾದರು.
ಈ ಬಾರಿ ಕೋವಿ ಶೀಲ್ಡ್ ಮಾತ್ರ ಬಂದಿದ್ದು, ಕೋವ್ಯಾಕ್ಸ್ ಬಾರದಿರುವು ದರಿಂದ ಎರಡನೇ ಬಾರಿಗೆ ಡೋಸ್ ಪಡೆಯುವವರು ಗೊಂದಲಕ್ಕೀಡಾಗಿ ದ್ದಾರೆ. ಶೀಘ್ರವೇ ಕೋವ್ಯಾಕ್ಸ್ ಲಸಿಕೆ ಕೂಡ ಬರಬಹುದು. ಕೋವ್ಯಾಕ್ಸ್ ಮೊದಲ ಡೋಸ್ ಪಡೆದ ಬಳಿಕ ಒಂದು ತಿಂಗಳ ಬಳಿಕ ಎರಡನೇ ಡೋಸ್ ಪಡೆಯಬಹುದು. ಕೋವಿಶೀಲ್ಡ್‌ಗೆ 6-8ವಾರಗಳ ಬಳಿಕ ತೆಗೆದುಕೊಳ್ಳಬಹುದು ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂದನ್ ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಇಂದು 200 ಡೋಸ್ ಕೋವಿ ಶೀಲ್ಡ್ ಲಸಿಕೆ ಬಂದಿದ್ದು, ನಿನ್ನೆ ಟೋಕನ್ ಪಡೆದುಕೊಂಡವರಿಗೆ ನೀಡಲಾಗಿದೆ. ಆದರೆ ಇಂದು ನಮ್ಮಲ್ಲಿರುವ ಡೋಸ್‌ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಲಸಿಕೆಗಾಗಿ ಬಂದ ಕಾರಣ ಸಮಸ್ಯೆ ಆಗಿದೆ. ಕೆಲವೊಂದು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಲ್ಲರನ್ನು ಸಮಾಧಾನ ಪಡಿಸಲಾಗಿದೆ.
-ಡಾ.ಮಧುಸೂದನ್ ನಾಯಕ್, ಜಿಲ್ಲಾ ಸರ್ಜನ್, ಉಡುಪಿ
ಕೊರೋನ ಲಸಿಕೆ ಹಾಕಲು ಬೆಳಗ್ಗೆ ರಿಕ್ಷಾದಲ್ಲಿ ಪತ್ನಿ ಜೊತೆ ಜಿಲ್ಲಾಸ್ಪತ್ರೆಗೆ ಬಂದಿದ್ದೇನೆ. ಈಗ ಲಸಿಕೆ ಹಾಕಿ ಮನೆಗೆ ಹೋಗಬೇಕಾದರೆ ನಮಗೆ ಯಾವುದೇ ವಾಹನ ಸಿಗುತ್ತಿಲ್ಲ. ರಿಕ್ಷಾದವರು ಕರೆ ಮಾಡಿದರೂ ಪೊಲೀಸರ ಭಯದಿಂದ ಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಗೆ ಹೋಗುವುದೇ ದೊಡ್ಡ ಚಿಂತೆ ಆಗಿದೆ.
-ದಾಮೋದರ ಕಾಮತ್ ಇಂದ್ರಾಳಿ
ಫೀವರ್ ಕ್ಲಿನಿಕ್‌ನಲ್ಲಿ ಸ್ಥಳಾವಕಾಶದ ಕೊರತೆ!
ಕೊರೋನಾ ಪರೀಕ್ಷೆಗೆ ಜಿಲ್ಲೆಯ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಿಲ್ಲಾಸ್ಪತ್ರೆಗೆ ಬರುತ್ತಿರುವುದರಿಂದ ಸ್ಥಳಾವಕಾಶದ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ.
ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಫೀವರ್ ಕ್ಲಿನಿಕ್‌ನಲ್ಲಿ ಸ್ಥಳಾವಕಾಶದ ಕೊರತೆಯಿಂದ ಪ್ರತಿದಿನ 200 ಮಂದಿಯ ಮಾತ್ರ ಗಂಟಲು ದ್ರವ ಸಂಗ್ರಹ ಮಾಡಲಾಗುತ್ತಿದ್ದು, ಇಬ್ಬರು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಸಮುದಾಯ ಕೇಂದ್ರಗಳಲ್ಲಿ ಗಂಟಲು ದ್ರವ ಸಂಗ್ರಹಕ್ಕೆ ಅವಕಾಶ ಇದ್ದರೂ ಜನ ಜಿಲ್ಲಾಸ್ಪತ್ರೆಗೆ ಬರುತ್ತಿರುವುದರಿಂದ ಸಮಸ್ಯೆಗಳಾಗುತ್ತಿವೆ ಮತ್ತು ಕೆಲವನ್ನು ಗೊಂದಲಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ಸರ್ಜನ್ ಡಾ.ಮಧುಸೂದನ್ ನಾಯಕ್.
ಮುಂದೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಫೀವರ್ ಕ್ಲಿನಿಕ್‌ನ್ನು ಸಮೀಪ ದಲ್ಲಿರುವ ಸೈಂಟ್ ಸಿಸಿಲಿ ಶಾಲೆಯ ಆವರಣಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇದರಿಂದ ಹೆಚ್ಚಿನ ಜನರನ್ನು ಸುರಕ್ಷಿತ ಅಂತರದೊಂದಿಗೆ ಪರೀಕ್ಷೆಗೆ ಒಳಡಿಸಲು ಸಾಧ್ಯವಾಗುತ್ತದೆ ಎಂದರು.








