ಉಡುಪಿ ಜಿಪಂ ಆಡಳಿತಾಧಿಕಾರಿಯಾಗಿ ಡಾ.ಎಂ.ಟಿ.ರೇಜು

ಉಡುಪಿ, ಎ.28: ಮಂಗಳವಾರ ತನ್ನ ಐದು ವರ್ಷಗಳ ಕಾರ್ಯಾವಧಿ ಪೂರ್ಣಗೊಂಡ ಉಡುಪಿ ಜಿಲ್ಲಾ ಪಂಚಾಯತ್‌ಗೆ ಇನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ, ರಾಜ್ಯ ಎಂ.ಜಿ.ರೇಜು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್‌ನ ಚುನಾಯಿತ ಅವಧಿ ಮಂಗಳವಾರ ಮುಕ್ತಾಯಗೊಂಡಿದೆ. ಹೀಗಾಗಿ ಈ ಹಿಂದೆ ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ, ಸದ್ಯ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ಆಡಳಿತ ನಿರ್ದೇಶಕರಾಗಿ ರುವ ಡಾ.ಎಂ.ಟಿ.ರೇಜು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್‌ಗೆ 2016ರ ಫೆಬ್ರವರಿ ತಿಂಗಳಲ್ಲಿ ಚುನಾವಣೆ ನಡೆದಿತ್ತು. ದಿನಕರಬಾಬು ಅಧ್ಯಕ್ಷತೆಯ ಜಿಪಂ ಐದು ವರ್ಷಗಳ ಆಡಳಿತಾವಧಿ ಯನ್ನು ಪೂರ್ಣಗೊಳಿಸಿದೆ.
ಕೋವಿಡ್ ಕಾರಣದಿಂದ ಈಗಾಗಲೇ ನಡೆಯಬೇಕಿದ್ದ ಜಿಪಂ ಹಾಗೂ ತಾಪಂ ಚುನಾವಣೆಗಳು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.ಮುಂದೆ ಜಿಪಂಗೆ ಚುನಾವಣೆ ನಡೆದು ಹೊಸ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗುವ ವರೆಗೂ ಈಗ ನೇಮಕಗೊಂಡಿರುವ ಆಡಳಿತಾಧಿಕಾರಿಗಳ ಅವಧಿ ಮುಂದು ವರಿಯುತ್ತದೆ.
ತಾ.ಪಂ.ಗಳಿಗೆ ಆಡಳಿತಾಧಿಕಾರಿ: ಇದರೊಂದಿಗೆ ಮೇ 5ರಂದು ಅವಧಿ ಪೂರ್ಣಗೊಳ್ಳುವ ಉಡುಪಿ ತಾಲೂಕು ಪಂಚಾಯತ್, ಜೂ.5ರಂದು ಅವಧಿ ಪೂರ್ಣಗೊಳ್ಳುವ ಕುಂದಾಪುರ ತಾಪಂ ಹಾಗೂ ಸೆ.5ರಂದು ಅವಧಿ ಪೂರ್ಣಗೊಳ್ಳುವ ಕಾರ್ಕಳ ತಾಪಂಗಳಿಗೆ ಉಡುಪಿ ಜಿಪಂ ಉಪಕಾರ್ಯದರ್ಶಿ ಅಥವಾ ಸಮಾನ ಸ್ಥಾನಮಾನದ ಅಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯ ಬ್ರಹ್ಮಾವರ, ಬೈಂದೂರು, ಹೆಬ್ರಿ ಹಾಗೂ ಕಾಪು ತಾಪಂಗಳು ಹೊಸದಾಗಿ ರಚನೆಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.







