ಉಡುಪಿ: ಬಿಜೆಪಿಯಿಂದ ಕೋವಿಡ್-19 ಸಹಾಯವಾಣಿ

ಉಡುಪಿ, ಎ.28: ದೇಶದಾದ್ಯಂತ ಕೊರೋನಾ ಸಾಂಕ್ರಾಮಿಕ ರೋಗದ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಿರ್ದೇಶನ ದಂತೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕೋವಿಡ್-2.0 ಸಹಾಯವಾಣಿ ಸೇವಾ ಹೀ ಸಂಘಟನ್ ಅಭಿಯಾನ-2ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅವರು ಜಿಲ್ಲಾ ಕೋವಿಡ್-2.0 ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡುತಿದ್ದರು. ಈ ಸಹಾಯವಾಣಿಯ ಮೂಲಕ ಜನತೆಯ ಕೋವಿಡ್ ಸಂಬಂಧಿತ ಸಂಕಷ್ಟಗಳಿಗೆ ತ್ವರಿತವಾಗಿ ಸ್ಪಂಧಿಸಲಾಗುವುದು ಎಂದರು.
ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭಗೊಂಡಿರುವ ಬಿಜೆಪಿ ಜಿಲ್ಲಾ ಕೋವಿಡ್-2.0 ಸಹಾಯವಾಣಿ ದಿನದ 24 ಗಂಟೆಯೂ ಕೋವಿಡ್ ಸೋಂಕಿತರಿಗೆ ಅಗತ್ಯ ನೆರವು ನೀಡುವಲ್ಲಿ ತುರ್ತು ಸೇವೆ ಸಲ್ಲಿಸಲಿದೆ. ಇದಕ್ಕಾಗಿ ಬಿಜೆಪಿ ಜಿಲ್ಲಾ ಪ್ರಮುಖರನ್ನೊಳಗೊಂಡ ಸಹಾಯವಾಣಿ ತಂಡವನ್ನು ರಚಿಸಲಾಗಿದೆ ಎಂದವರು ತಿಳಿಸಿದರು.
ಕೇಂದ್ರ ಸರಕಾರದ ನಿಯಮಾವಳಿಯಂತೆ ಸಂಬಂಧಪಟ್ಟ ನಾಗರಿಕರಿಗೆ ಕೋವಿಡ್ ಲಸಿಕೆ ಪಡೆಯಲು ಸಹಕರಿಸುವುದು, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಪಡೆದು ಜನತೆಯ ಸಂಕಷ್ಟಕ್ಕೆ ಸ್ಪಂದಿಸುವುದು ಇವೇ ಮುಂತಾದ ತುರ್ತು ಸೇವೆಗಳನ್ನು ಒದಗಿಸುವಲ್ಲಿ ಬಿಜೆಪಿ ಜಿಲ್ಲಾ ಕೋವಿಡ್-2.0 ಸಹಾಯವಾಣಿ ಶ್ರಮಿಸಲಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯರುವ ಬೆಡ್‌ಗಳು, ಆಕ್ಸಿಜನ್, ವೆಂಟಿಲೇಟರ್,ಅಂಬುಲೆನ್ಸ್, ಕೋವಿಡ್ ಲಸಿಕೆ ಹಾಗೂ ಆಸ್ಪತ್ರೆಗಳ ಪ್ರಮುಖರ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಜನತೆ ಯಲ್ಲಿ ಜಾಗೃತಿ ಮೂಡಿಸುವುದು, ಲಸಿಕೆ ಪಡೆಯುವಲ್ಲಿ ಸಹಕರಿಸುವುದು, ರಕ್ತದಾನ ಶಿಬಿರಗಳ ಆಯೋಜನೆ ಇವೇ ಮುಂತಾದ ವಿಷಯಗಳ ಕುರಿತು ವಿಚಾರವಿನಿಮಯ ನಡೆಯಿತು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಸತ್ಯಾನಂದ ನಾಯಕ್ ಆತ್ರಾಡಿ, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಂ. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಮಂಜುನಾಥ ಮಣಿಪಾಲ ಮುಂತಾದವರು ಉಪಸ್ಥಿತರಿದ್ದರು.







