ಥಾಣೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ದುರಂತ,ಕನಿಷ್ಠ ನಾಲ್ವರ ಸಾವು

ಮುಂಬೈ,ಎ.28: ಥಾಣೆ ಜಿಲ್ಲೆಯ ಮುಂಬ್ರಾದಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ನಸುಕಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ ನಾಲ್ವರು ರೋಗಿಗಳು ಮೃತಪಟ್ಟಿದ್ದಾರೆ. ರೋಗಿಗಳಿಗೆ ಸುಟ್ಟ ಗಾಯಗಳಾಗಿರಲಿಲ್ಲ ಮತ್ತು ಅವರನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸುತ್ತಿದ್ದಾಗ ನಾಲ್ವರು ಸಾವನ್ನಪ್ಪಿದ್ದಾರೆ.
ಬೆಂಕಿ ಹತ್ತಿಕೊಂಡು ಬಳಿಕ ಹೊಗೆಯನ್ನು ಅವರು ಉಸಿರಾಡಿದ್ದಿರಬಹುದು ಎಂದು ಥಾಣೆ ಮಹಾನಗರ ಪಾಲಿಕೆಯ ಅಧಿಕಾರಿಯೋರ್ವರು ತಿಳಿಸಿದರು. ಐದು ದಿನಗಳ ಹಿಂದಷ್ಟೇ ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್ನಲ್ಲಿಯ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ 15 ಕೊರೋನವೈರಸ್ ರೋಗಿಗಳು ಮೃತಪಟ್ಟಿದ್ದರು.
ಕೌಸಾ-ಮುಂಬ್ರಾ ಪ್ರದೇಶದ ಪ್ರೈಂ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬುಧವಾರ ಬೆಳಗಿನ ಜಾವ 3:40ರ ಸುಮಾರಿಗೆ ಬೆಂಕಿ ಅವಘಡ ನಡೆದಿದ್ದು, ಯಾವುದೇ ಕೊರೋನ ವೈರಸ್ ರೋಗಿಗಳು ಆಸ್ಪತ್ರೆಯಲ್ಲಿರಲಿಲ್ಲ. ಐಸಿಯುನಲ್ಲಿದ್ದ ಆರು ಜನರು ಸೇರಿದಂತೆ 20 ರೋಗಿಗಳನ್ನು ತೆರವುಗೊಳಿಸಲಾಗಿದೆ. ಆಸ್ಪತ್ರೆಯ ಮೊದಲ ಅಂತಸ್ತಿಗೆ ತೀವ್ರ ಹಾನಿಯುಂಟಾಗಿದೆ ಎಂದು ಅಧಿಕಾರಿ ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಮಹಾರಾಷ್ಟ್ರ ಸಚಿವ ಹಾಗೂ ಸ್ಥಳೀಯ ಶಾಸಕ ಜಿತೇಂದ್ರ ಅಹ್ವಾಡ್ ಅವರು,ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ ಒಂದು ಲಕ್ಷ ಪರಿಹಾರವನ್ನು ಪ್ರಕಟಿಸಿದರು. ಬೆಂಕಿ ಅನಾಹುತಕ್ಕೆ ಕಾರಣವನ್ನು ಕಂಡುಕೊಳ್ಳಲು ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದರು.