10 ಕೆಜಿ ಅಕ್ಕಿಗೆ ಆಗ್ರಹಿಸಿ ನಾಳೆಯಿಂದ ಪತ್ರ ಚಳವಳಿ: ಡಿ.ಕೆ.ಶಿವಕುಮಾರ್

ಬೆಂಗಳೂರು, ಎ.28: ಸರಕಾರ ಜನಸಾಮಾನ್ಯರಿಗೆ 2 ಕೆ.ಜಿ ಬದಲು 10 ಕೆ.ಜಿ ಅಕ್ಕಿ ನೀಡಬೇಕು ಎಂದು ಆಗ್ರಹಿಸಿ ನಾಳೆಯಿಂದ ಮುಖ್ಯಂತ್ರಿಗಳನ್ನು ಪತ್ರ ಚಳವಳಿ ಮೂಲಕ ಆಗ್ರಹಿಸುತ್ತೇವೆ. ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಈ ಚಳವಳಿಯಲ್ಲಿ ಭಾಗವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದರ ಜತೆಗೆ ವಿಡಿಯೋ ಮಾಡಿ ನಿಮ್ಮ ನೋವು, ಈ ಕಷ್ಟ ಕಾಲದಲ್ಲಿ 10 ಕೆ.ಜಿ ಅಕ್ಕಿ ಯಾಕೆ ಕೊಡಬೇಕು ಎಂಬುದನ್ನು ವಿವರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸರಕಾರಕ್ಕೆ ಆಗ್ರಹಿಸಿ. ಸರಕಾರ ನಿಮ್ಮ ಮನವಿ ಸ್ವೀಕರಿಸದಿದ್ದರೆ, ನಾವು ನಿಮಗೆ ಒಂದು ಸಂಖ್ಯೆ ನೀಡುತ್ತೇವೆ. ಅದಕ್ಕೆ ಕಳುಹಿಸಿಕೊಡಿ ಎಂದರು.
ಈ ಚಳವಳಿಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಎಲ್ಲ ಜಿಲಾಧ್ಯಕ್ಷರು ಪಧಾಧಿಕಾರಿಗಳು, ಕಾರ್ಯಕರ್ತರಿಗೆ ಮನವಿ ಮಾಡುತ್ತಿದ್ದೇನೆ. ಈ ಚಳವಳಿ ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿಯನ್ನು ಮನೆಗೆ ಕಳುಹಿಸುವ ಚಳವಳಿ ಆಗಬೇಕು ಎಂದು ಶಿವಕುಮಾರ್ ಕರೆ ನೀಡಿದರು.
ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡಲಿ: ಲಸಿಕೆ ಪಡೆಯಲು ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ನಾನು ಮುಖ್ಯಮಂತ್ರಿಗಳಿಗೆ ಕೇಳಲು ಇಚ್ಛಿಸುತ್ತೇನೆ. ನೀವು ಬುದ್ಧಿವಂತರಿದ್ದೀರಿ, ನಿಮ್ಮ ಬಳಿ ಜನ ಇದ್ದಾರೆ. ನಮ್ಮ ಹಳ್ಳಿ ಜನರಿಗೆ ಆನ್‍ಲೈನ್ ವ್ಯವಸ್ಥೆ ಇಲ್ಲ. ಆ ಬಗ್ಗೆ ಅವರಿಗೆ ಗೊತ್ತಿಲ್ಲ. ಯಾರಿಗೆ ಅನುಕೂಲ ಇದೆಯೋ, ಯಾರು ವಿದ್ಯಾವಂತರೋ ಅವರಿಗೆ ಮಾತ್ರ ಲಸಿಕೆ ಕೊಡುತ್ತೀರಾ? ಬಡವರು, ಅವಿದ್ಯಾವಂತರು, ಮುಗ್ಧರಿಗೆ ಲಸಿಕೆ ನೀಡುವುದಿಲ್ಲ ಎಂದು ಕಾಣುತ್ತಿದೆ. ಈ ಆನ್‍ಲೈನ್ ವ್ಯವಸ್ಥೆ ತಪ್ಪಿಸಿ, ಪ್ರತಿಯೊಬ್ಬ ನಾಗರಿಕನಿಗೂ ಅವನ ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.
ನೆರೆ ರಾಷ್ಟ್ರ ಭೂತಾನ್‍ನಲ್ಲಿ ಹಳ್ಳಿಗಾಡಿನಲ್ಲಿ ಇರುವ ಬೆರಳೆಣಿಕೆ ಜನರಿಗೆ ಹೆಲಿಕಾಪ್ಟರ್ ನಲ್ಲಿ ಹೋಗಿ ಲಸಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ದೊರಕಿಸಬೇಕು ಎಂದು ಶಿವಕುಮಾರ್ ಹೇಳಿದರು.
ಮೋದಿ ಫೋಟೋ ಹಾಕುತ್ತೀರಾ?: ಎರಡನೇ ಡೋಸ್ ಲಸಿಕೆ ಪಡೆದವರಿಗೆ ನೀಡುವ ಸರ್ಟಿಫಿಕೇಟ್‍ನಲ್ಲಿ ಮೋದಿ ಅವರ ಫೋಟೋ ಹಾಕುತ್ತಿದ್ದೀರಿ, ಕೋವಿಡ್‍ನಿಂದ ಸಾಯುತ್ತಿದ್ದಾರಲ್ಲ ಅವರ ಮರಣ ಪತ್ರದಲ್ಲೂ ಮೋದಿ ಅವರ ಫೋಟೋ ಹಾಕುತ್ತೀರಾ? ಸರಕಾರ ಈ ತಾರತಮ್ಯ ಮಾಡದೇ, ಎಲ್ಲರಿಗೂ ಲಸಿಕೆ ಹಾಕಿಸಲಿ. ಯಾರ ಫೋಟೋ ಹಾಕುವುದೂ ಬೇಡ. ಜನರಿಗೆ ಲಸಿಕೆ ನೀಡುತ್ತಿರುವುದು ಸರಕಾರ. ಜನರ ದುಡ್ಡಿನಲ್ಲಿ ನೆರವಾಗುವುದು ನಿಮ್ಮ ಜವಾಬ್ದಾರಿ, ಅದನ್ನು ಮಾಡುತ್ತಿದ್ದೀರಿ ಅಷ್ಟೇ ಎಂದು ಶಿವಕುಮಾರ್ ಹೇಳಿದರು.
ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಅರಂಭಿಸುವ ಬಗ್ಗೆ ಚರ್ಚೆ ನಡೆಸಿ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದು ಅಂತಿಮವಾದ ನಂತರ ಮಾಹಿತಿ ನೀಡುತ್ತೇನೆ. ಕೊರೋನ ಸೋಂಕಿತರ ಚಿಕಿತ್ಸೆಗೆ ಸರಕಾರವು ಖಾಸಗಿ ಆಸ್ಪತ್ರೆಗಳಿಂದ ಶೇ.80ರಷ್ಟು ಹಾಸಿಗೆ ಪಡೆಯುತ್ತಿದೆ. ಆದರೆ ಈ ಆಸ್ಪತ್ರೆಗಳಿಗೆ ರೆಮ್‍ಡೆಸಿವಿರ್, ಆಕ್ಸಿಜನ್ ಮತ್ತಿತರ ಅಗತ್ಯ ಔಷಧಗಳನ್ನು ಪೂರೈಸುವುದಿಲ್ಲ, ನೀವೇ ವ್ಯವಸ್ಥೆ ಮಾಡಿಕೊಳ್ಳಿ ಎಂದರೆ ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.
ಸರಕಾರಿ ಆಸ್ಪತ್ರೆಗಳಿಗೆ ರೆಮ್ಡಿಸಿವಿಯರ್ ಪೂರೈಕೆ ಮಾಡಲಾಗುತ್ತಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೂ ಸರಕಾರಿ ಆಸ್ಪತ್ರೆಯಲ್ಲಿ ಇದರ ಅಭಾವ ಹೆಚ್ಚಾಗುತ್ತಿದೆ. ಹೊರಗೆ 20 ರಿಂದ 40 ಸಾವಿರ ರುಪಾಯಿವರೆಗೂ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದರರ್ಥ ಏನು? ಸರಕಾರಿ ಆಸ್ಪತ್ರೆಯಲ್ಲಿ ಇದರ ದುರ್ಬಳಕೆಯಾಗುತ್ತಿದೆ ಎಂದಲ್ಲವೇ ಎಂದು ಅವರು ಪ್ರಶ್ನಿಸಿದರು.
ಸರಕಾರವೇ ಡ್ರಗ್ ಕಂಟ್ರೋಲರ್ ಮೂಲಕ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಈ ಚುಚ್ಚುಮದ್ದು ಪೂರೈಸಬೇಕು. ಇವುಗಳ ಬಳಕೆ ಹಾಗೂ ಬೆಲೆ ಮೇಲೆ ನಿಗಾ ವಹಿಸಬೇಕು. ಸರಕಾರ ಈ ವಿಚಾರದಲ್ಲಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕೇ ಹೊರತು, ಖಾಸಗಿ ಅವರು ತಮಗೆ ಬೇಕಾದ ಔಷಧ ತಾವೇ ತರಿಸಿಕೊಳ್ಳಲಿ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಶಿವಕುಮಾರ್ ಹೇಳಿದರು.
ಕಳೆದ ವರ್ಷ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳಿಗೆ ಸರಕಾರ ಹಣ ಪಾವತಿಸದೆ, ಬಾಕಿ ಉಳಿಸಿಕೊಂಡಿದೆ. ಅದನ್ನು ತಕ್ಷಣ ಬಿಡುಗಡೆ ಮಾಡಬೇಕು. ಬಾಕಿ ಬಿಡುಗಡೆ ಮಾಡದೇ ಈ ವರ್ಷ ಹಾಸಿಗೆಗಳನ್ನು ಕೊಡಿ ಎಂದು ಸರಕಾರ ಕೇಳುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.







