ಕೋಟ: ವಾರದಿಂದ ನಾಪತ್ತೆಯಾಗಿದ್ದ ಯಕ್ಷಗಾನ ಕಲಾವಿದ ಪತ್ತೆ
ಕೋಟ, ಎ.28: ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದ ಯಕ್ಷಗಾನ ಕಲಾವಿದ, ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ ಪ್ರಧಾನ ನಗರದ ನಿವಾಸಿ ಉದಯ ಹೆಗಡೆ(37) ಇಂದು ಬೆಂಗಳೂರಿನಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೆರ್ಡೂರು ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿದ್ದ ಉದಯ ಹೆಗಡೆ, ಎ.21ರಂದು ಸಂಜೆ ಮನೆಯಿಂದ ಕಾರಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆಂದು ಹೋದವರು ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಪೊಲೀಸ್ ದೂರು ನೀಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಉದಯ ಹೆಗಡೆ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿರುವುದನ್ನು ಪತ್ತೆಹಚ್ಚಿದ್ದಾರೆ. ಇಷ್ಟು ದಿನ ನಾಪತ್ತೆಗೆ ಕಾರಣ ಏನೆಂದು ವಿಚಾರಣೆಯಿಂದ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





