ಮಂಗಳೂರು: ಕೊರೋನ ಸೋಂಕು ನಿಗ್ರಹಕ್ಕೆ ನೆರವು ನೀಡಲು ಸಂಸದರ ಮನವಿ
ಮಂಗಳೂರು, ಎ.28: ಕೊರೋನ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಆಕ್ಸಿಜನ್ ಘಟಕಗಳ ನಿರ್ಮಾಣ, ಆಕ್ಸಿಜಿನ್ ಸಿಲಿಂಡರ್ ಸಹಿತ ಎಲ್ಲಾ ಅತ್ಯಗತ್ಯ ವೈದ್ಯಕೀಯ ನೆರವು ನೀಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಸರಕಾರಿ ಸಹಭಾಗಿತ್ವದ ಮತ್ತು ಖಾಸಗಿ ಕಂಪನೆಗಳಿಗೆ ಸೂಚನೆ ನೀಡಿದರು.
ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಹಿಂದೆಂದೂ ಕಾಣದಂತಹ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದೆ. ಸೋಂಕಿತರನ್ನು ಉಳಿಸಿಕೊಳ್ಳುವುದು ಎಲ್ಲರಿಗೂ ದೊಡ್ಡ ಸವಾಲಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರಕಾರಿ ಸಹಭಾಗಿತ್ವದ ಮತ್ತು ಖಾಸಗಿ ಕಂಪೆನಿಗಳು ನೆರವಿನ ಹಸ್ತ ಚಾಚಬೇಕು ಎಂದು ಸಂಸದರು ಮನವಿ ಮಾಡಿದರು.
ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವವರಿಂದ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುವುದು ಕಂಡು ಬರುತ್ತಿದೆ. ಹಾಗಾಗಿ ಅವರನ್ನು ತಪ್ಪದೆ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದ ಸಂಸದರು, ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಅವರಿಗೆ ಉತ್ತಮ ಚಿಕತ್ಸೆ ನೀಡಲು ಅಗತ್ಯವಿರುವ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚು ಕಾಯ್ದಿರಿ ಸಿಕೊಳ್ಳುವುದರೊಂದಿಗೆ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡೆಳಿತ ಮುಂದಾಗಬೆಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ತೀವ್ರವಾಗಿ ಹೆಚ್ಚಾದಲ್ಲಿ ಅಗತ್ಯ ಕಂಡುಬಂದಾಗ ವಿವಿಗಳ ವಿದ್ಯಾರ್ಥಿ ನಿಲಯಗಳು, ಸರಕಾರಿ ವಿದ್ಯಾರ್ಥಿ ನಿಲಯ, ಶಾಲೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾದಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಪಂ ಸಿಇಒ ಡಾ. ಕುಮಾರ್, ಶಾಸಕ ರಾಜೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.







