ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಕ್ರಮ ವಹಿಸಲು ಸಚಿವ ಕೋಟ ಸೂಚನೆ

ಮಂಗಳೂರು, ಎ.28: ಕೋವಿಡ್ ನಿಯಂತ್ರಣಕ್ಕೆ ಸರಕಾರದ ಹೊಸ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಚಾಚು ತಪ್ಪದೆ ಜಾರಿಗೊಳಿಸಬೇಕು. ಕೋವಿಡ್ ಔಷಧಗಳು, ಆಕ್ಸಿಜನ್, ರೋಗ ನಿರೋಧಕ ಲಸಿಕೆ ಸಮರ್ಪಕ ನಿರ್ವಹಣೆಯೊಂದಿಗೆ ರೈತರು, ಕೈಗಾರಿಕೆಗಳ ಸಹಿತ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್-19 ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೋನ ಕರ್ಪ್ಯೂ ಕುರಿತು ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಸಾರ್ವಜನಿಕರು ಅಗತ್ಯವಸ್ತು ಖರೀದಿ ಇತ್ಯಾದಿಗಳಿಗೆ ನಿಗದಿಪಡಿಸಿರುವ ಸಮಯದಲ್ಲಿ ಹೊರತುಪಡಿಸಿ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಹೋಗಬಾರದು, ಕಟ್ಟಡ ನಿರ್ಮಾಣ ಕಾರ್ಮಿಕರು, ಕೈಗಾರಿಕೆಗಳಿಗೆ ತೆರಳುವ ಕಾರ್ಮಿಕರು ಹಾಗೂ ರೈತರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಕೋವಿಡ್ ನಿರೋಧಕ ಚುಚ್ಚುಮದ್ದನ್ನು 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ನೀಡಬೇಕು. 45 ರಿಂದ 60 ವರ್ಷದ ವಯಸ್ಸಿನವರಿಗೆ, 2 ನೇ ಬಾರಿ ಕೋಡ್ ನಿರೋಧಕ ಚುಚ್ಚುಮದ್ದು ಪಡೆಯುವವರಿಗೆ ಆದ್ಯತೆ ಮೇಲೆ ಚುಚ್ಚುಮದ್ದು ನೀಡಬೇಕು. ಸರಕಾರ 18 ವರ್ಷ ಮೇಲ್ಪಟ್ಟ 45 ವರ್ಷದ ಒಳಗಿನ ವಯೋಮಿತಿಯವರಿಗೂ ಚುಚ್ಚುಮದ್ದು ಪಡೆಯಲು ನೋಂದಣಿಗೆ ಅವಕಾಶ ನೀಡಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್ ನಿರೋಧಕ ಚುಚ್ಚುಮದ್ದುಗಳ ದಾಸ್ತಾನು ಇಟ್ಟುಕೊಳ್ಳುವುದರೊಂದಿಗೆ ಚುಚ್ಚುಮದ್ದು ನೀಡಲು ಮುಂದಾಗಬೇಕು ಎಂದರು.
ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಮಾತನಾಡಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲಭೂತ ಸೌಕರ್ಯವನ್ನೊಳಗೊಂಡ ಆಕ್ಸಿಜನ್ ಸೌಲಭ್ಯ ಒದಗಿಸುವುದರೊಂದಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಬೇಕು ಎಂದು ವೈದ್ಯರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಶಾಸಕರಾದ ಭರತ್ ಶೆಟ್ಟಿ ವೈ, ಡಿ. ವೇದವ್ಯಾಸ ಕಾಮತ್, ರಾಜೇಶ್ ನಾಯ್ಕಾ ಯು, ಹರೀಶ್ ಪೂಂಜ, ಉಮಾನಾಥ್ ಎ. ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ನಗರ ಪೋಲಿಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಜಿಪಂ ಸಿಇಒ ಡಾ.ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.