18ರಿಂದ 44 ವಯಸ್ಸಿನವರಿಗೆ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವುದಿಲ್ಲ: ಮಹಾರಾಷ್ಟ್ರ ಸರಕಾರ
ರಾಜ್ಯದ ಜನತೆಗೆ ಉಚಿತ ಲಸಿಕೆ ನೀಡಲು ಸಚಿವ ಸಂಪುಟ ನಿರ್ಧಾರ

ಮುಂಬೈ: ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮೇ 15ರ ತನಕ ಹಾಲಿ ಲಾಕ್ ಡೌನ್ ಅನ್ನು ವಿಸ್ತರಿಸುವುದಾಗಿ ಬುಧವಾರ ಪ್ರಕಟಿಸಿರುವ ಮಹಾರಾಷ್ಟ್ರ ಸರಕಾರ, ಸಾಕಷ್ಟು ಲಸಿಕೆಗಳ ಡೋಸ್ ಇಲ್ಲದ ಕಾರಣ ಮೇ 1ರಿಂದ 18ರಿಂದ 44 ವಯಸ್ಸಿನವರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡುವುದಿಲ್ಲ ಎಂದು ಹೇಳಿದೆ,
18ರಿಂದ 44 ವಯಸ್ಸಿನ ಜನರು ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಪಡೆಯಬಹುದು. ಆದರೆ, ಖಾಸಗಿ ಕೇಂದ್ರಗಳಲ್ಲಿ ಲಸಿಕೆಯನ್ನು ಹಣ ನೀಡಿ ಪಡೆಯಬೇಕಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದರು.
ಬುಧವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ನಡೆದ ಸಂಪುಟ ಸಭೆಯಲ್ಲಿ ಉಚಿತ ಲಸಿಕೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಹೆಜ್ಜೆಯಿಂದಾಗಿ ರಾಜ್ಯ ಸರಕಾರದ ಬೊಕ್ಕಸಕ್ಕೆ 6,500 ಕೋ.ರೂ. ಹೊರೆಯಾಗಲಿದೆ ಎಂದು ಟೋಪೆ ತಿಳಿಸಿದರು.
ರಾಜ್ಯದಲ್ಲಿ 5ಲಕ್ಷ ಲಸಿಕೆಗಳ ಡೋಸ್ ಗಳು ಅರ್ಹ ಜನರಿಗೆ ನೀಡುವಷ್ಟು ಬಾಕಿ ಇದೆ. ಮುಂದಿನ 3 ದಿನಗಳಲ್ಲಿ 5 ಲಕ್ಷ ಡೋಸ್ ಗಳನ್ನು ಸರಬರಾಜು ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.