ಕೋವ್ಯಾಕ್ಸಿನ್‌ನಿಂದ ಭಾರತೀಯ ರೂಪಾಂತರಿ ಕೊರೋನ ಪ್ರಭೇದ ನಿಷ್ಕ್ರಿಯ
ಅಮೆರಿಕದ ಪ್ರಮುಖ ಕೊರೋನ ಸಲಹೆಗಾರ ಆ್ಯಂತನಿ ಫೌಚಿ

ವಾಶಿಂಗ್ಟನ್, ಎ. 28: ಭಾರತದ ಔಷಧ ತಯಾರಿಕಾ ಕಂಪೆನಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆ ಕೋವ್ಯಾಕ್ಸಿನ್, ಕೊರೋನ ವೈರಸ್‌ನ ಭಾರತೀಯ ಅವಳಿ ರೂಪಾಂತರಿ ಪ್ರಭೇದ ಬಿ.1.617ನ್ನು ನಿಷ್ಕ್ರಿಯಗೊಳಿಸಿರುವುದು ಕಂಡುಬಂದಿದೆ ಎಂದು ಅಮೆರಿಕದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಆ್ಯಂತನಿ ಫೌಚಿ ಮಂಗಳವಾರ ಹೇಳಿದ್ದಾರೆ.
ಈ ವಿಷಯದಲ್ಲಿ ಈಗಲೂ ನಾವು ಪ್ರತಿನಿತ್ಯ ಅಂಕಿಅಂಶಗಳನ್ನು ಕಲೆಹಾಕುತ್ತಿದ್ದೇವೆ. ಇತ್ತೀಚಿನ ಅಂಕಿಅಂಶಗಳು, ಕೋವಿಡ್-19 ಸೋಂಕಿಗೆ ಒಳಗಾಗಿರುವ ಹಾಗೂ ಭಾರತದ ಕೋವ್ಯಾಕ್ಸಿನ್ ಲಸಿಕೆಯನ್ನು ತೆಗೆದುಕೊಂಡಿರುವ ಜನರಿಂದ ಪಡೆದ ರಕ್ತದ ಮಾದರಿಗಳಿಗೆ ಸಂಬಂಧಿಸಿದ್ದಾಗಿದೆ. ಕೊರೋನ ವೈರಸ್‌ನ 617 ಪ್ರಭೇದವನ್ನು ಈ ಲಸಿಕೆಯು ನಿಷ್ಕ್ರಿಯಗೊಳಿಸಿರುವುದು ಕಂಡುಬಂದಿದೆ ಎಂದು ಫೌಚಿ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಾಗಾಗಿ, ಭಾರತದಲ್ಲಿ ಇಂದು ನಾವು ಕಾಣುತ್ತಿರುವ ಹತಾಶ ಪರಿಸ್ಥಿತಿಯ ಹೊರತಾಗಿಯೂ, ಲಸಿಕೆ ತೆಗೆದುಕೊಳ್ಳುವುದು ಈ ಸಾಂಕ್ರಾಮಿಕದ ವಿರುದ್ಧದ ಮಹತ್ವದ ಪ್ರತ್ಯಸ್ತ್ರವಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಾ. ಫೌಚಿ ಹೇಳಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಕಂಪೆನಿಯು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಮ್‌ಆರ್)ಗಳ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಿದೆ. ಅದು ವೈದ್ಯಕೀಯ ಪರೀಕ್ಷೆಯಲ್ಲಿ ಇರುವಾಗಲೇ, ಜನವರಿ 3ರಂದು ಭಾರತ ಸರಕಾರವು ಅದಕ್ಕೆ ತುರ್ತು ಬಳಕೆಗಾಗಿ ಅನುಮೋದನೆ ನೀಡಿತ್ತು.
ಲಸಿಕೆಯು 78 ಶೇಕಡ ಪರಿಣಾಮಕಾರಿ ಎನ್ನುವುದನ್ನು ವೈದ್ಯಕೀಯ ಪರೀಕ್ಷೆಗಳು ತೋರಿಸಿವೆ ಎಂಬುದಾಗಿ ಬಳಿಕ ಐಸಿಎಮ್‌ಆರ್ ತಿಳಿಸಿದೆ.







