ಉತ್ತರಪ್ರದೇಶದ ಪರಿಸ್ಥಿತಿ ಆತಂಕಕಾರಿ: ಶಿವಸೇನೆ ನಾಯಕ ಸಂಜಯ್ ರಾವತ್

ಮುಂಬೈ, ಎ. 28: ಉತ್ತರಪ್ರದೇಶದ ಪರಿಸ್ಥಿತಿ ಆತಂಕಕಾರಿ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಅಲ್ಲದೆ, ಕೊರೋನ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ನಡುವೆ ರಾಜ್ಯದ ಜನರಿಗೆ ನೆರವಿನ ಹಸ್ತ ಚಾಚುವಂತೆ ಎಲ್ಲ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದ್ದಾರೆ. ‘‘
"ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದ ಕಾಂಗ್ರೆಸ್ ಉಸ್ತುವಾರಿ. ಉತ್ತರಪ್ರದೇಶ ಅತಿ ದೊಡ್ಡ ರಾಜ್ಯ. ಈ ರಾಜ್ಯದ ಜನಸಂಖ್ಯೆ ಅತಿ ಹೆಚ್ಚು. ಇಡೀ ರಾಜ್ಯದ ಪರಿಸ್ಥಿತಿ ಆತಂಕಕಾರಿ, ಭಯಾನಕ. ಈ ಸಂದರ್ಭ ಎಲ್ಲ ಪಕ್ಷಗಳು ರಾಜಕೀಯ ಮರೆತು ಸಂಘಟಿತವಾಗಬೇಕು ಹಾಗೂ ಉತ್ತರಪ್ರದೇಶಕ್ಕೆ ಯಾವ ನೆರವು ನೀಡಲು ಸಾಧ್ಯ ಎಂಬ ಬಗ್ಗೆ ಚಿಂತಿಸಬೇಕು’’ ಎಂದು ಅವರು ಹೇಳಿದ್ದಾರೆ.
‘‘ಮುಂಬೈಯಂತಹ ಸ್ಥಳಗಳಲ್ಲಿ ಲಾಕ್ಡೌನ್ ಪರಿಣಾಮ ಕಂಡು ಬರುತ್ತಿವೆ. ಮುಂಬೈಯಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಅರ್ಧದಷ್ಟು ಇಳಿಕೆಯಾಗಿದೆ. ಕೊರೋನ ಸೋಂಕಿತರ ಸಂಖ್ಯೆ ಕಡಿಮೆಯಾದರೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸಬೇಕು’’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರ ಜಾರಿಗೊಳಿಸಿದ ವ್ಯವಸ್ಥೆ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆ ಮುಖ್ಯಮಂತ್ರಿ ಅವರೇ ಸ್ವತಃ ಪರಿಶೀಲಿಸುತ್ತಿದ್ದಾರೆ. ಇದರಿಂದ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.