ಕೋವಿಡ್ ಕರ್ಫ್ಯೂ ಹಿನ್ನೆಲೆ: ಬೆಂಗಳೂರಿನ ಮಾರುಕಟ್ಟೆಗಳು ಸ್ಥಳಾಂತರ

ಬೆಂಗಳೂರು, ಎ.28: ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೇ 12ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ವರ್ತಕರ ಸುರಕ್ಷತೆಯ ದೃಷ್ಟಿಯಿಂದ ನಗರದ ಕೆ.ಆರ್.ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳನ್ನು ಹೊರವಲಯಗಳಿಗೆ ಸ್ಥಳಾಂತರ ಮಾಡಲಾಗಿದೆ.
ದಿನನಿತ್ಯ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಹೂವು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕಲಾಸಿಪಾಳ್ಯದ ತರಕಾರಿ ಸಗಟು ಮಾರುಕಟ್ಟೆ ಸಿಂಗೇನ ಅಗ್ರಹಾರ ಪ್ರಾಂಗಣಕ್ಕೆ ಸ್ಥಳಾಂತರಗೊಂಡಿದೆ.
ಯಶವಂತಪುರದ ಎಪಿಎಂಪಿ ಪ್ರಾಂಗಣದಲ್ಲಿದ್ದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮಾರುಕಟ್ಟೆಯನ್ನು ದಾಸನಪುರ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಪಿಎಂಸಿ ವ್ಯಾಪ್ತಿಯ ಮಾರುಕಟ್ಟೆಗಳನ್ನು ಸ್ಥಳಾಂತರಿಸಲಾಗಿದೆ.
ಅವೆನ್ಯೂ ರೋಡ್ ಮಾರುಕಟ್ಟೆ ವಿಕೇಂದ್ರೀಕರಣಕ್ಕೆ ವ್ಯಾಪಾರಿಗಳು ಎರಡು ದಿನ ಸಮಯಾವಕಾಶ ಕೇಳಿದ್ದಾರೆ. ನಗರದಲ್ಲಿ ತಳ್ಳುವ ಗಾಡಿಗೆ ಮಾತ್ರ ಅವಕಾಶ ನೀಡಲಾಗಿದ್ದು. ಪಾದಚಾರಿ ರಸ್ತೆಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ.







