ಬೆಂಗಳೂರಿನಲ್ಲಿ ಕೋವಿಡ್ ಲಸಿಕೆಯ ಅಭಾವ ಸೃಷ್ಟಿ: ಆರೋಗ್ಯ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಂತಿರುವ ಜನತೆ

ಬೆಂಗಳೂರು, ಎ.28: ಕೋವಿಡ್ ಎರಡನೇ ಅಲೆಯಿಂದ ಕೋವಿಡ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಭಯಭೀತಗೊಂಡ ಜನತೆ ಲಸಿಕೆ ಪಡೆಯಲು ಆರೋಗ್ಯ ಕೇಂದ್ರಗಳಲ್ಲಿ ಧಾವಿಸುತ್ತಿದ್ದಾರೆ. ಆದರೆ, ಬೇಡಿಕೆಗಳಿಗೆ ತಕ್ಕಷ್ಟು ಲಸಿಕೆಗಳ ಪೂರೈಕೆ ಇಲ್ಲವಾಗಿರುವುದರಿಂದ ಹಲವು ಮಂದಿ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂದು ವರದಿಯಾಗಿದೆ.
ಪ್ರಾರಂಭದಲ್ಲಿ ಲಸಿಕೆ ಪಡೆಯಲು ಉದಾಸೀನ ತೋರಿದ ಜನತೆ, ಕೋವಿಡ್ ಪ್ರಕರಣಗಳ ಹೆಚ್ಚಳ, ವೈದ್ಯರ ಸಲಹೆ ಮೇರೆಗೆ ಲಸಿಕೆ ಪಡೆಯಲು ಆರೋಗ್ಯ ಕೇಂದ್ರಗಳತ್ತ ಹೆಚ್ಚಿನ ಮಂದಿ ಬರುತ್ತಿದ್ದಾರೆ. ನಗರದ ಪ್ರತಿ ಆರೋಗ್ಯ ಕೇಂದ್ರದಲ್ಲಿ ಲಸಿಕೆಗಾಗಿ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಆದರೆ, ಬಂದ ಎಲ್ಲರಿಗೂ ಲಸಿಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.
ಕೆಲವು ಆರೋಗ್ಯ ಕೇಂದ್ರಗಳಲ್ಲಿ ಮಧುಮೇಹ ಹೆಚ್ಚಿದ್ದರೆ ಲಸಿಕೆಯನ್ನು ಕೊಡದೆ ವಾಪಸ್ ಕಳೆಸಲಾಗುತ್ತಿದೆ. ಈ ಬಗ್ಗೆ ಮಹಿಳೆಯೊಬ್ಬರು ಮಾತನಾಡಿ, ನಾನು ಕಳೆದ ನಾಲ್ಕು ದಿನದ ಹಿಂದೆ ಲಸಿಕೆ ಹಾಕಿಸಲು ಹೋದೆ. ನನ್ನ ಪಲ್ಸ್ ರೇಟ್ ಹೆಚ್ಚಾಗಿದೆ. ಹೀಗಾಗಿ ಲಸಿಕೆ ಹಾಕಲು ಆಗುವುದಿಲ್ಲ. ಥೈರಾಯ್ಡ್, ಇಸಿಜಿ, ಶುಗರ್ ಪರೀಕ್ಷೆ ಮಾಡಿಕೊಂಡು ಬನ್ನಿ ಅಂದರು. ಎಲ್ಲವನ್ನು ಪರೀಕ್ಷೆ ಮಾಡಿಸಿಕೊಂಡು ವರದಿ ತೆಗೆದುಕೊಂಡು ವೈದ್ಯರ ಬಳಿಗೆ ಹೋದರೆ, ಇಸಿಜಿ, ಥೈರಾಯ್ಡ್ ನಾರ್ಮಲ್ ಇದೆ. ಆದರೆ, ಶುಗರ್ ಲೆವಲ್‍ನ್ನು ಕಡಿಮೆ ಮಾಡಿಕೊಂಡು ಬನ್ನಿ. ಆ ಮೇಲೆ ಹಾಕುತ್ತೇನೆಂದು ಹೇಳಿದರು ಎಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಧುಮೇಹ, ರಕ್ತದೊತ್ತಡ ಇರುವವರೇ ಮುಖ್ಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಹೇಳಲಾಗುತ್ತಿದೆ. ಆದರೆ, ಮಧುಮೇಹದ ಅಂಶ ಹೆಚ್ಚಿದ್ದವರಿಗೆ ಲಸಿಕೆ ಹಾಕುವುದಿಲ್ಲವೆಂದು ವಾಪಸ್ ಕಳುಹಿಸಲಾಗುತ್ತಿದ್ದು, ಇದರಿಂದ ಜನತೆ ಆತಂಕಕ್ಕೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ.







