ಕೊರೋನ ಬಿಕ್ಕಟ್ಟಿನ ಸಮಯದಲ್ಲೂ ಸೆಂಟ್ರಲ್ ವಿಸ್ತ ಯೋಜನೆ ಮುಂದುವರಿಕೆ: ಕೇಂದ್ರದ ವಿರುದ್ಧ ರಾಹುಲ್ ಟೀಕೆ
ಹೊಸದಿಲ್ಲಿ, ಎ.29: ಕೊರೋನ ಸೋಂಕಿನ ಕಾರಣದಿಂದ ದಿಲ್ಲಿಯಲ್ಲಿ ಲಾಕ್ಡೌನ್ ಘೋಷಿಸಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಿರುವ ಮಧ್ಯೆಯೇ, ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತ ಯೋಜನೆಯ ಕಾಮಗಾರಿ ಎಗ್ಗಿಲ್ಲದೆ ಮುಂದುವರಿದಿರುವುದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
‘ಸೆಂಟ್ರಲ್ ವಿಸ್ತ ಅನಗತ್ಯ. ಆದರೆ ಕೇಂದ್ರದ ದೃಷ್ಟಿಯಲ್ಲಿ ಮಾತ್ರ ಅಗತ್ಯ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ತನಗೆ ಕೊರೋನ ಸೋಂಕು ದೃಢಪಟ್ಟಿರುವುದಾಗಿ ಎಪ್ರಿಲ್ 20ರಂದು ಮಾಹಿತಿ ನೀಡಿದ್ದ ರಾಹುಲ್ ಗಾಂಧಿ, ಸಾಂಕ್ರಾಮಿಕ ರೋಗವನ್ನು ಸರಕಾರ ನಿರ್ವಹಿಸುತ್ತಿರುವ ರೀತಿಯನ್ನು ನಿರಂತರ ಟೀಕಿಸುತ್ತಿದ್ದಾರೆ. ಲಸಿಕೆ, ಆಮ್ಲಜನಕದ ಕೊರತೆ ವಿಪರೀತವಾಗಿದೆ. ಕೊರೋನ ವಿರುದ್ಧದ ಹೋರಾಟದಲ್ಲಿ ಆಡಳಿತಾರೂಢ ಬಿಜೆಪಿಯ ವೈಪಲ್ಯದಿಂದ ದೇಶ ಬಲಿಪಶುವಾಗುತ್ತಿದೆ ಎಂದು ರವಿವಾರ ಟ್ವೀಟ್ ಮಾಡಿದ್ದರು.
1,500 ಕೋಟಿ ರೂ. ವೆಚ್ಚದ ಈ ಯೋಜನೆಗೆ ಹಣ ವ್ಯಯಿಸುವ ಬದಲು ಇದನ್ನು ದೇಶದಲ್ಲಿ ಇನ್ನಷ್ಟು ಜನರಿಗೆ ಉಚಿತ ಲಸಿಕೆ ಒದಗಿಸಲು, ಪಿಪಿಇ ಕಿಟ್ ಒದಗಿಸಲು, ಒಪ್ಪೊತ್ತಿನ ಊಟಕ್ಕೂ ತೊಂದರೆಯಲ್ಲಿರುವ ವಲಸೆ ಕಾರ್ಮಿಕರ ಖಾತೆಗೆ ನೇರ ವರ್ಗಾಯಿಸಬಹುದಿತ್ತು ಎಂಬುದು ವಿಪಕ್ಷಗಳ ಆಶಯವಾಗಿದೆ ಎಂದು ಟಿಎಂಸಿ ಮುಖಂಡ ಡೆರೆಕ್ ಒ’ಬ್ರಿಯಾನ್ ಹೇಳಿದ್ದಾರೆ. ಸೆಂಟ್ರಲ್ ವಿಸ್ತ ಯೋಜನೆಯ ಕಾಮಗಾರಿಯನ್ನು ಅಗತ್ಯ ಸೇವೆಗಳ ವ್ಯಾಪ್ತಿಯಡಿ ಸೇರಿಸಿರುವುದಕ್ಕೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ದಿಲ್ಲಿಯಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿಯಿದೆ, ಆದರೆ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲೇ ವಾಸ್ತವ್ಯದ ವ್ಯವಸ್ಥೆ ಮಾಡಬೇಕು. ಆದರೆ ಹೊಸ ಸಂಸತ್ ಕಟ್ಟಡ ನಿರ್ಮಾಣವೂ ಸೇರಿದಂತೆ ಸೆಂಟ್ರಲ್ ವಿಸ್ತ ಕಾಮಗಾರಿ ನಿರ್ವಹಿಸುವ ಕಾರ್ಮಿಕರು 16 ಕಿ.ಮೀ ದೂರದ ಕೀರ್ತಿನಗರದಿಂದ ಬಂದು ಹೋಗುತ್ತಿದ್ದಾರೆ ಎಂದು ಎನ್ಡಿ ಟಿವಿ ವರದಿ ಮಾಡಿದೆ.