50 ರೂ.ಗೆ ಡಯಾಲಿಸಿಸ್ ವ್ಯವಸ್ಥೆ ಒದಗಿಸಿದ್ದ ಕೋಲ್ಕತಾದ ವೈದ್ಯರಿಂದ 7 ಬಾರಿ ಪ್ಲಾಸ್ಮಾ ದಾನ

ಕೋಲ್ಕತಾ, ಎ.29: ಬಡವರಿಗೆ ಕೇವಲ 50 ರೂ. ಶುಲ್ಕದಲ್ಲಿ ಡಯಾಲಿಸಿಸ್ ವ್ಯವಸ್ಥೆ ಮಾಡಿ ಸರ್ವತ್ರ ಶ್ಲಾಘನೆಗೆ ಪಾತ್ರರಾಗಿದ್ದ ಕೋಲ್ಕತಾದ ವೈದ್ಯ ಡಾ. ಫವಾದ್ ಹಲೀಂ, ಇದರ ಜೊತೆಗೆ ಕೊರೋನ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡುವ ಮೂಲಕವೂ ಸಮಾಜ ಸೇವೆಯನ್ನು ಮುಂದುವರಿಸಿದ್ದಾರೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.
ಈ ಬಾರಿಯ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹಲೀಂ ಸಿಪಿಎಂ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಳೆದ ವರ್ಷ ಕೊರೋನ ಸೋಂಕಿನಿಂದಾಗಿ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದ ಸಂದರ್ಭ ಕೊರೋನ ಸೋಂಕಿತರಲ್ಲದ ರೋಗಿಗಳಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದೇ ಅಸಾಧ್ಯ ಎಂಬ ಪರಿಸ್ಥಿತಿಯಿತ್ತು. ದಿನಾ ಡಯಾಲಿಸಿಸ್ ಅಗತ್ಯವಿರುವ ಜನರಿಗಂತೂ ದಿಕ್ಕೇ ತೋಚದಂತಾಗಿತ್ತು. ಖಾಸಗಿ ಆಸ್ಪತ್ರೆಗಳು ಒಮ್ಮೆ ಡಯಾಲಿಸಿಸ್ ಮಾಡಿಕೊಂಡರೆ 1,200 ರೂ.ಯಿಂದ 2,000 ರೂ. ಶುಲ್ಕ ವಿಧಿಸುತ್ತಿವೆ. ಈ ಸಂದರ್ಭ ಡಾ. ಹಲೀಂ ದಕ್ಷಿಣ ಕೋಲ್ಕತಾದ ಪಾರ್ಕ್ ರಸ್ತೆಯಲ್ಲಿರುವ ತಮ್ಮ ಕ್ಲಿನಿಕ್ ನಲ್ಲಿ ಕೇವಲ 50 ರೂ.ಗಳಿಗೆ ಡಯಾಲಿಸಿಸ್ ವ್ಯವಸ್ಥೆ ಮಾಡಿ ಬಡಜನರಿಗೆ ನೆರವಾಗಿದ್ದರು. ಇದರಲ್ಲಿ ಕೊರೋನ ಸೋಂಕಿತರೂ ಸೇರಿದ್ದರು.
ಈ ಮಧ್ಯೆ ಕಳೆದ ಜುಲೈಯಲ್ಲಿ 50 ವರ್ಷದ ಡಾ. ಹಲೀಂಗೂ ಕೊರೋನ ಸೋಂಕು ದೃಢಪಟ್ಟಿತ್ತು. ಆಗಸ್ಟ್ನಲ್ಲಿ ಸಂಪೂರ್ಣ ಚೇತರಿಸಿಕೊಂಡ ಬಳಿಕ ಸೆಪ್ಟಂಬರ್ ನಿಂದ ಇದುವರೆಗೆ 7 ಬಾರಿ ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ. ಕೊರೋನ ಸೋಂಕಿನ ಲಸಿಕೆಯನ್ನು ಅವರು ಇನ್ನೂ ಪಡೆದಿಲ್ಲ. ಲಸಿಕೆ ಪಡೆದ ಬಳಿಕ 28 ದಿನ ಪ್ಲಾಸ್ಮಾ ದಾನ ಮಾಡುವಂತಿಲ್ಲ. ಮಾನವ ರಕ್ತದಲ್ಲಿರುವ ಒಂದು ಅಂಶವಾಗಿರುವ ಪ್ಲಾಸ್ಮಾದಲ್ಲಿ ಪ್ರತಿಕಾಯ (ಆ್ಯಂಟಿಬಾಡಿ)ಗಳಿರುತ್ತದೆ. ಪ್ಲಾಸ್ಮಾ ಥೆರಪಿ ಕೊರೋನ ಸೋಂಕು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗಿದೆ. ಪ.ಬಂಗಾಳ ವಿಧಾನಸಭೆಯ ಸ್ಪೀಕರ್ ದಿವಂಗತ ಹಾಶಿಂ ಅಬ್ದುಲ್ ಹಲೀಂ ಪುತ್ರರಾಗಿರುವ ಡಾ. ಹಲೀಂ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಬೃಹತ್ ಜನ ಸೇರಿಸಿ ಚುನಾವಣಾ ರ್ಯಾಲಿ ನಡೆಸುವ ಬದಲು ಸಣ್ಣಪುಟ್ಟ ರ್ಯಾಲಿ ನಡೆಸಿ ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದಕ್ಕೇ ಗಮನ ನೀಡಿದ್ದಾರೆ. ಚುನಾವಣೆಗೆ ಆನ್ಲೈನ್ ಪ್ರಚಾರಕ್ಕೆ ಆದ್ಯತೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ತನ್ನ ಜೀವನದಲ್ಲಿ ಎರಡು ವಿಷಯಗಳಿಗೆ ಗಮನ ನೀಡುತ್ತೇನೆ. ಒಂದು ರಾಜಕಾರಣಿಯಾಗಿ ಮತ್ತೊಂದು ವೈದ್ಯನಾಗಿ. ಎರಡರಲ್ಲೂ ಸಾಮ್ಯತೆಯಿದೆ. ಜನರ ಸೇವೆ ಮಾಡಲು ರಾಜಕಾರಣಿಯಾದೆ. ವೈದ್ಯಕೀಯ ತರಬೇತಿ ಪಡೆದು ಜನರಿಗೆ ಕೆಲವು ವಿಶಿಷ್ಟ ಸೇವೆ ಮಾಡಲು ಅವಕಾಶ ದೊರಕಿದೆ. ಆರೋಗ್ಯ ಅವಕಾಶ ನೀಡುವವರೆಗೂ ಪ್ಲಾಸ್ಮಾ ದಾನ ನೀಡುವುದನ್ನು ಮುಂದುವರಿಸುತ್ತೇನೆ ಎಂದು ಡಾ. ಹಲೀಂ ಹೇಳಿದ್ದಾರೆ.