ದಿಲ್ಲಿ: ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚುವರಿ ಅಧಿಕಾರ
ನೀಡುವ ಜಿಎನ್ಸಿಟಿ ಕಾಯ್ದೆ ಜಾರಿ ಹೊಸದಿಲ್ಲಿ, ಎ.29: ಗವರ್ನ್ಮೆಂಟ್ ಆಫ್ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ದಿಲ್ಲಿ(ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಿ ಮಂಗಳವಾರ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು ಇದರೊಂದಿಗೆ ದಿಲ್ಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರೇ ಸುಪ್ರೀಂ ಆಗಲಿದ್ದಾರೆ.
ದಿಲ್ಲಿಯಲ್ಲಿ ಜಿಎನ್ಸಿಟಿ ಕಾಯ್ದೆ ಎಪ್ರಿಲ್ 27ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ ಎಂದು ಕೇಂದ್ರ ಸರಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಕೇಂದ್ರಾಡಳಿತ ಪ್ರದೇಶ ದಿಲ್ಲಿಯಲ್ಲಿ ಮುಖ್ಯಮಂತ್ರಿಗಿಂತ ಲೆಫ್ಟಿನೆಂಟ್ ಗವರ್ನರ್ಗೆ ಹೆಚ್ಚಿನ ಅಧಿಕಾರ ಕಲ್ಪಿಸುವ ವಿವಾದಾತ್ಮಕ ಜಿಎನ್ಸಿಟಿ ಮಸೂದೆಗೆ ವಿರೋಧ ಪಕ್ಷಗಳ ಭಾರೀ ವಿರೋಧದ ನಡುವೆಯೂ ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆ ದೊರೆತ ಬಳಿಕ ಮಾರ್ಚ್ 28ರಂದು ರಾಷ್ಟ್ರಪತಿ ಸಹಿ ಹಾಕಿದ್ದರು.
ಮಸೂದೆಗೆ ಸಂಸತ್ತಿನ ಅನುಮೋದನೆ ದೊರಕಿದ ಬಳಿಕ ಪ್ರತಿಕ್ರಿಯಿಸಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಭಾರತದ ಪ್ರಜಾಪ್ರಭುತ್ವಕ್ಕೆ ಇದೊಂದು ದುಃಖದ ದಿನವಾಗಿದೆ ಎಂದಿದ್ದರು.