ಆಮ್ಲಜನಕ ಪೂರೈಕೆಯಲ್ಲಿ ಸ್ವಾವಲಂಬಿಯಾದ ಮಹಾರಾಷ್ಟ್ರದ ಆದಿವಾಸಿ ಜಿಲ್ಲೆ

ಸಾಂದರ್ಭಿಕ ಚಿತ್ರ
ಮುಂಬೈ, ಎ.29: ಇಡೀ ದೇಶವೇ ಕೊರೋನ ಸೋಂಕಿನ ಎರಡನೇ ಅಲೆಯಿಂದ ತತ್ತರಿಸಿರುವಾಗ ಮಹಾರಾಷ್ಟ್ರದ ಜಿಲ್ಲಾಧಿಕಾರಿಯೊಬ್ಬರು ತಮ್ಮ ಜಿಲ್ಲೆಯಲ್ಲಿ ಸಾಕಷ್ಟು ಆಮ್ಲಜನಕದ ಪೂರೈಕೆ, ಕೋವಿಡ್ ರೋಗಿಗಳಿಗಾಗಿ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ, ಪ್ರತ್ಯೇಕ ವಾರ್ಡ್ ವ್ಯವಸ್ಥೆ ಹಾಗೂ ಸಮರ್ಪಕ ಲಸಿಕೆ ಅಭಿಯಾನದಿಂದ ಗಮನ ಸೆಳೆದಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಆದಿವಾಸಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಾರಾಷ್ಟ್ರದ ನಂದೂಬಾರ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭರೂದ್ ಉತ್ತಮ ಯೋಜನೆ ಹಾಗೂ ಸೂಕ್ತ ಪೂರ್ವಸಿದ್ಧತೆಯಿಂದ ತಮ್ಮ ಜಿಲ್ಲೆಯಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಎದುರಿಸಲು ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಂಡಿದ್ದಾರೆ. ಇದರಿಂದ ಜಿಲ್ಲೆಯ ಆಸ್ಪತ್ರೆಗಳಲ್ಲಿ ಸುಮಾರು 150 ಖಾಲಿ ಬೆಡ್ ಗಳಿದ್ದು ಕೊರೋನ ಸೋಂಕಿತರು ಬೆಡ್ ಗಾಗಿ ಅಲೆದಾಡುವ ಪ್ರಮೇಯವಿಲ್ಲ. ಜೊತೆಗೆ ಜಿಲ್ಲೆಯಲ್ಲಿರುವ 2 ಆಮ್ಲಜನಕ ಘಟಕಗಳು ನಿಮಿಷಕ್ಕೆ 2,400 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಕೊರೋನ ಸೋಂಕಿನ ಸಕ್ರಿಯ ಪ್ರಮಾಣವನ್ನು 30%ಕ್ಕಿಂತಲೂ ಕಡಿಮೆಗೊಳಿಸಲು ಈ ಜಿಲ್ಲೆ ಯಶಸ್ವಿಯಾಗಿದೆ. ಇಲ್ಲಿರುವ ಸುಸಜ್ಜಿತ ವೈದ್ಯಕೀಯ ವ್ಯವಸ್ಥೆಯಿಂದಾಗಿ ನೆರೆ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಗುಜರಾತ್ ನಿಂದಲೂ ಕೊರೋನ ಸೋಂಕಿತರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ.
ಕಳೆದ ವರ್ಷ ಕೊರೋನ ಸೋಂಕಿನ ಪ್ರಥಮ ಅಲೆಯಿದ್ದ ಸಂದರ್ಭ ನಂದಾಬಾರ್ನಲ್ಲಿ ಆಮ್ಲಜನಕದ ಘಟಕ ಇರಲಿಲ್ಲ. ಆದರೆ ಭರೂದ್ ಅವರ ಪ್ರಯತ್ನದ ಫಲವಾಗಿ ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಜಿಲ್ಲೆಯಲ್ಲಿ ಮೊದಲ ಆಮ್ಲಜನಕ ಘಟಕ ಕಾರ್ಯಾರಂಭ ಮಾಡಿತ್ತು ಎಂದು ವರದಿ ತಿಳಿಸಿದೆ.