ಪಿಎಂ ಕೇರ್ಸ್ ನಿಧಿಯ ಮೂಲಕ ಒಂದು ಲಕ್ಷ ಆಮ್ಲಜನಕ ಸಾಂದ್ರಕಗಳ ಖರೀದಿ: ಪ್ರಧಾನಿ ಮೋದಿ

ಹೊಸದಿಲ್ಲಿ,ಎ.28: ದೇಶಾದ್ಯಂತ ಆಸ್ಪತ್ರೆಗಳು ದ್ರವ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರವು ಪಿಎಂ ಕೇರ್ಸ್ ನಿಧಿಯ ಮೂಲಕ ಒಂದು ಲಕ್ಷ ಪೋರ್ಟೆಬಲ್ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲಿದೆ ಎಂದು ಗುರುವಾರ ಪ್ರಕಟಿಸಿದರು.
ಪಿಎಂ ಕೇರ್ಸ್ ನಿಧಿಯಡಿ 500 ಹೆಚ್ಚುವರಿ ಪಿಎಸ್ಎ (ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಶನ್) ಆಮ್ಲಜನಕ ಸ್ಥಾವರಗಳ ಸ್ಥಾಪನೆಗೆ ಮಂಜೂರಿಯನ್ನು ನೀಡಲಾಗಿದೆ ಎಂದೂ ಅವರು ಪ್ರಕಟಿಸಿದರು. ಕೇಂದ್ರವು ಈ ಹಿಂದೆ 713 ಸ್ಥಾವರಗಳ ಸ್ಥಾಪನೆಗೆ ಮಂಜೂರಿ ನೀಡಿತ್ತು.
ದೇಶಾದ್ಯಂತ ಕೊರೋನವೈರಸ್ ಸೋಂಕುಗಳು ನಿಯಂತ್ರಣ ಮೀರುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯ ಬಳಿಕ ಈ ನಿರ್ಧಾರ ಹೊರಬಿದ್ದಿದೆ.
ದೇಶಾದ್ಯಂತ ದ್ರವ ವೈದ್ಯಕೀಯ ಆಮ್ಲಜನಕದ ಕೊರತೆಯ ಬಗ್ಗೆ ಸಭೆಯಲ್ಲಿ ಮೋದಿ ಮತ್ತು ವಿವಿಧ ಹಿರಿಯ ಅಧಿಕಾರಿಗಳು ಚರ್ಚಿಸಿದ್ದು,ಅಧಿಕ ಕೊರೋನವೈರಸ್ ಪ್ರಕರಣಗಳಿರುವ ರಾಜ್ಯಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವಂತೆ ಮೋದಿ ಅಧಿಕಾರಿಗಳಿಗೆ ನಿರ್ದೇಶ ನೀಡಿದರು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ದೇಶೀಯ ತಯಾರಕರಿಗೆ ಡಿಆರ್ಡಿಒ ಮತ್ತು ಸಿಎಸ್ಐಆರ್ ಅಭಿವೃದ್ಧಿಗೊಳಿಸಿರುವ ಸ್ವದೇಶಿ ತಂತ್ರಜ್ಞಾನದ ವರ್ಗಾವಣೆಯೊಂದಿಗೆ ಈ 500 ಪಿಎಸ್ಎ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಎಂದೂ ಅದು ತಿಳಿಸಿದೆ.