ಆಸ್ಪತ್ರೆಯ ಹೊರಗೆ ಐದು ಗಂಟೆ ಕಾದು ಕಾರಿನಲ್ಲಿಯೇ ಕೊನೆಯುಸಿರೆಳೆದ ಮಾಜಿ ಭಾರತೀಯ ರಾಯಭಾರಿ
ಸಂತಾಪ ಸೂಚಿಸಿ ಟ್ವೀಟ್ ಮಾಡಿದ ವಿದೇಶಾಂಗ ಸಚಿವ ಜೈಶಂಕರ್

Photo: ANI
ಹೊಸದಿಲ್ಲಿ,ಎ.29: ಬ್ರೂನಿ,ಮೊಝಾಂಬಿಕ್ ಮತ್ತು ಅಲ್ಜೀರಿಯಾಗಳಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದ ಅಶೋಕ್ ಅಮ್ರೋಹಿ ಅವರು ಬುಧವಾರ ಬೆಳಗಿನ ಜಾವ ಗುರಗಾಂವ್ ನ ಮೇದಾಂತ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪಾರ್ಕಿಂಗ್ ಸ್ಥಳದಲ್ಲಿ ಐದು ಗಂಟೆಗಳ ಸುದೀರ್ಘ ಕಾಲ ಕಾದು ಕುಳಿತಿದ್ದಾಗಲೇ ಕೊನೆಯುಸಿರೆಳೆದಿದ್ದಾರೆ.
ಅಮ್ರೋಹಿ ನಿಧನವು ತನಗೆ ಆಘಾತವನ್ನುಂಟು ಮಾಡಿದೆ ಎಂದು ಟ್ವೀಟಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್,ಅವರು ತನ್ನ ಒಳ್ಳೆಯ ಸ್ನೇಹಿತ ಮತ್ತು ಸಹೋದ್ಯೋಗಿಯಾಗಿದ್ದರು ಹಾಗೂ ಬ್ರೂನಿ,ಮೊಝಾಂಬಿಕ್ ಮತ್ತು ಅಲ್ಜೀರಿಯಾಗಳಲ್ಲಿ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದರು ಎಂದು ಹೇಳಿದ್ದಾರೆ. ಅಮ್ರೋಹಿ ಕೆಲಸ ಮಾಡಿದ್ದ ದೇಶಗಳಿಂದ ಹೃದಯಸ್ಪರ್ಶಿ ಸಂತಾಪ ಸಂದೇಶಗಳು ಹರಿದುಬಂದಿದ್ದು,ಇದು ಅವರು ಎಷ್ಟೊಂದು ಜನಾನುರಾಗಿಯಾಗಿದ್ದರು ಎನ್ನುವುದನ್ನು ತೋರಿಸಿದೆ. ವರ್ಷಗಳ ಹಿಂದೆ ಕತರ್ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರಥಮ ಕಾರ್ಯದರ್ಶಿಯಾಗಿ ಅವರು ಕಾರ್ಯ ನಿರ್ವಹಿಸಿದ್ದು, ಅಲ್ಲಿಂದಲೂ ಸಂತಾಪಗಳು ಬಂದಿರುವುದು ಸ್ಥಳೀಯ ಭಾರತೀಯ ಸಮುದಾಯದಲ್ಲಿ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಕಳೆದ ವಾರದಿಂದ ಅನಾರೋಗ್ಯದಿಂದಿದ್ದ ಅಮ್ರೋಹಿಯವರ ದೇಹಸ್ಥಿತಿ ಬಿಗಡಾಯಿಸಿದ್ದರಿಂದ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದರು. ಮೇದಾಂತ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಎಂಟು ಗಂಟೆಗೆ ಹಾಸಿಗೆ ಲಭ್ಯವಾಗುತ್ತದೆ ಎಂದು ವೈದ್ಯರೋರ್ವರು ತಿಳಿಸಿದ್ದು,ಕುಟುಂಬದವರು ಸಂಜೆ 7:30ಕ್ಕೇ ಅಮ್ರೋಹಿಯವರನ್ನು ಆಸ್ಪತ್ರೆಗೆ ಕರೆತಂದಿದ್ದರು.
‘ಕೋವಿಡ್-19 ಪರೀಕ್ಷೆಯನ್ನು ಮಾಡಿಸಬೇಕೆಂದು ಸಿಬ್ಬಂದಿ ನಮಗೆ ತಿಳಿಸಿದ್ದರು ಮತ್ತು ಅದಕ್ಕಾಗಿ ನಾವು ಒಂದೂವರೆ ಗಂಟೆ ಕಾದಿದ್ದೆವು. ನನ್ನ ಪತಿ ಕಾರಿನಲ್ಲಿಯೇ ಕುಳಿತುಕೊಂಡಿದ್ದರು. ಪರೀಕ್ಷೆಯ ಬಳಿಕ ನಮ್ಮ ಮಗ ಪ್ರವೇಶ ದಾಖಲಾತಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ,ಆದರೆ ಎಷ್ಟು ಹೊತ್ತಾದರೂ ಆತನ ಸರದಿ ಬಂದಿರಲಿಲ್ಲ. ನಾನು ಮೂರು ಸಲ ಅಲ್ಲಿಗೆ ತೆರಳಿ ಯಾರಾದರೂ ನನ್ನ ಪತಿಯನ್ನು ನೋಡಿ ಎಂದು ಸಿಬ್ಬಂದಿಗಳನ್ನು ಅಂಗಲಾಚಿ ಬೇಡಿದ್ದೆ. ಅವರು ಉಸಿರಾಡಲು ಕಷ್ಟ ಪಡುತ್ತಿದ್ದಾರೆ,ಹೃದಯಬಡಿತ ಕ್ಷೀಣಗೊಳ್ಳುತ್ತಿದೆ ಎಂದು ನಾನು ಕೂಗುತ್ತಿದ್ದೆ,ಆದರೆ ಯಾರೂ ನೆರವಾಗಲಿಲ್ಲ ’ಎಂದು ಅಮ್ರೋಹಿಯವರ ಪತ್ನಿ ಯಾಮಿನಿ ಅಮ್ರೋಹಿ ಸುದ್ದಿಗಾರರಿಗೆ ತಿಳಿಸಿದರು.
‘ಇದೆಲ್ಲ ಆಗುವಾಗ ನನ್ನ ಪತಿ ಕಾರಿನಲ್ಲಿಯೇ ಕುಳಿತಿದ್ದರು. ಅವರಿಗೆ ವೀಲ್ ಚೇರ್ ಅಥವಾ ಸ್ಟ್ರೆಚರ್ ಅನ್ನು ಒದಗಿಸಿರಲಿಲ್ಲ. ಪ್ರವೇಶ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಅವರನ್ನು ನೋಡುವುದಾಗಿ ವೈದ್ಯರು ತಿಳಿಸಿದ್ದರು. ಆಮ್ಲಜನಕ ಸಿಲಿಂಡರ್ ಲಭ್ಯವಾಗಿತ್ತಾದರೂ ಅದು ಉಪಯೋಗಕ್ಕೆ ಬಂದಿರಲಿಲ್ಲ. ಐದು ಗಂಟೆಗಳ ಬಳಿಕ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಾಗ ನನ್ನ ಪತಿ ಕುಳಿತಲ್ಲಿಯೇ ಹೃದಯಘಾತದಿಂದ ನಿಧನರಾಗಿದ್ದರು. ಪತಿಯ ನಿಧನದ ಬಳಿಕ ನಾನು ಆಸ್ಪತ್ರೆಗೆ ತೆರಳಿ ನೀವೆಲ್ಲ ಕೊಲೆಗಾರರು ಎಂದು ಕೂಗಾಡಿದ್ದೆ ’ಎಂದು ಶೋಕತಪ್ತ ಯಾಮಿನಿ ತಿಳಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೆರವನ್ನು ಕೋರಿದ್ದೀರಾ ಎಂಬ ಪ್ರಶ್ನೆಗೆ ಯಾಮಿನಿ,ಅದು ಏನು ಮಾಡುತ್ತಿತ್ತು ಎಂದು ಮರುಪ್ರಶ್ನಿಸಿದರು.
Shocked to learn of the passing away of Amb. Ashok Amrohi (IFS:1981). Was a good friend and dedicated colleague who ably represented India in Brunei, Mozambique and Algeria. Condolences to his family.
— Dr. S. Jaishankar (@DrSJaishankar) April 27, 2021
Om Shanti.