ಚುನಾವಣೋತ್ತರ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕೇರಳದಲ್ಲಿ ಪಿಣರಾಯಿ ಸರ್ಕಾರ, ತಮಿಳುನಾಡಿನಲ್ಲಿ ಡಿಎಂಕೆ
ಹೊಸದಿಲ್ಲಿ,ಎ.29: ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳ ಮತದಾನ ಪ್ರಕ್ರಿಯೆ ಗುರುವಾರ ಸಂಜೆ ಅಂತ್ಯಗೊಂಡ ಬೆನ್ನಿಗೇ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶಗಳು ಪ್ರಕಟಗೊಂಡಿವೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಮತ್ತು ಅಸ್ಸಾಮನ್ನು ಬಿಜೆಪಿ ಗೆಲ್ಲಲಿದೆ. ತಮಿಳುನಾಡಿನಲ್ಲಿ ಡಿಎಂಕೆಯ ‘ಸೂರ್ಯ’ ಉದಯಿಸಲಿದ್ದು, ಕೇರಳದಲ್ಲಿ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆಲುವಿನ ನಗೆಯನ್ನು ಬೀರಲಿದ್ದಾರೆ ಎಂದು ಹೆಚ್ಚಿನ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಮತ್ತು 294 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ 156 ಸ್ಥಾನಗಳನ್ನು ಅವರ ಟಿಎಂಸಿ ಗೆಲ್ಲಲಿದೆ. ಆದರೆ ಬಿಜೆಪಿಯು 121ರಷ್ಟು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಬಲ ಶಕ್ತಿಯಾಗಿ ಮೂಡಿಬರಲಿದೆ ಎಂದು ಎನ್ಡಿಟಿವಿಯು ನಡೆಸಿರುವ ಮತದಾನೋತ್ತರ ಸಮೀಕ್ಷೆಯು ಭವಿಷ್ಯ ನುಡಿದಿದೆ.
ಗುರುವಾರ ಸಂಜೆ ಪ್ರಕಟಗೊಂಡ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ.ಬಂಗಾಳ ವಿಧಾನಸಭೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಮೂರನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಆದರೆ ಈವರೆಗೆ ಹೊರಗಿನ ಪಕ್ಷವೆಂದು ಪರಿಗಣಿಸಿದ್ದ ರಾಜ್ಯದಲ್ಲಿ ವಿವಿಧ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಬಿಜೆಪಿಯ ಸ್ಥಾನಗಳಿಕೆ ಮಹತ್ವವನ್ನು ಪಡೆದುಕೊಂಡಿದೆ.
ವಿವಿಧ ಸಮೀಕ್ಷೆಗಳು ಪ.ಬಂಗಾಳದಲ್ಲಿ ಟಿಎಂಸಿಗೆ ಮೊದಲ ಸ್ಥಾನ ಮತ್ತು ಬಿಜೆಪಿಗೆ ಎರಡನೇ ಸ್ಥಾನ ನೀಡಿದ್ದರೆ,ರಿಪಬ್ಲಿಕ್ ಟಿವಿ-ಸಿಎನ್ಎಕ್ಸ್ ಸಮೀಕ್ಷೆಯು ಟಿಎಂಸಿ 128ರಿಂದ 138 ಮತ್ತು ಬಿಜೆಪಿ 138ರಿಂದ 148 ಸ್ಥಾನಗಳನ್ನು ಗೆಲ್ಲಲಿವೆ ಎಂದು ಭವಿಷ್ಯ ನುಡಿದಿದೆ.
ಸಮೀಕ್ಷೆಗಳು ಸೂಚಿಸಿರುವಂತೆ ಅಸ್ಸಾಮಿನಲ್ಲಿ ಕಾಂಗ್ರೆಸ್ಗೆ ನಿರಾಶೆ ಕಾದಿದೆ. ಅಲ್ಲಿ 126 ಸ್ಥಾನಗಳ ಪೈಕಿ ಎನ್ಡಿಎ 58ರಿಂದ 71,ಕಾಂಗ್ರೆಸ್ 53ರಿಂದ 66 ಹಾಗೂ ಇತರರು 1ರಿಂದ 4 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ.
ಕೇರಳದಲ್ಲಿ ವಿಜಯನ್ ನೇತೃತ್ವದ ಎಲ್ಡಿಎಫ್ ಮತ್ತೆ ಅಧಿಕಾರಕ್ಕೆ ಮರಳಲಿದೆ. ಅಲ್ಲಿ ಎಲ್ಡಿಎಫ್ಗೆ 104ರಿಂದ 120,ಯುಡಿಎಫ್ಗೆ 20ರಿಂದ 36 ಮತ್ತು ಎನ್ಡಿಎಗೆ ಶೂನ್ಯದಿಂದ ಎರಡು ಸ್ಥಾನಗಳು ದೊರೆಯಲಿವೆ ಎಂದು ಇಂಡಿಯಾ ಟುಡೇ-ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ತಿಳಿಸಿದೆ. ಹೆಚ್ಚಿನ ಎಲ್ಲ ಸಮೀಕ್ಷೆಗಳೂ ಎಲ್ಡಿಎಫ್ ಗೆಲ್ಲುವ ಭವಿಷ್ಯವನ್ನು ನುಡಿದಿವೆ.
ಟುಡೇಸ್ ಚಾಣಕ್ಯ ಸಮೀಕ್ಷೆಯಂತೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಸೋಲನ್ನು ಕಾಣಲಿದೆ ಮತ್ತು 175ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಅಧಿಕಾರಕ್ಕೆ ಮರಳಲಿದೆ. ಡಿಎಂಕೆ 175ರಿಂದ 195,ಎಐಎಡಿಎಂಕೆ 38ರಿಂದ 54 ಮತ್ತು ಎಎಂಎಂಕೆ 1ರಿಂದ 2 ಸ್ಥಾನಗಳನ್ನು ಗೆಲ್ಲಲಿವೆ ಎಂದು ಅದು ಹೇಳಿದೆ.