ಐಪಿಎಲ್: ರಾಜಸ್ಥಾನವನ್ನು ಮಣಿಸಿದ ಮುಂಬೈ ಇಂಡಿಯನ್ಸ್
ಕ್ವಿಂಟನ್ ಡಿಕಾಕ್ ಅರ್ಧಶತಕದ ಕೊಡುಗೆ

ಹೊಸದಿಲ್ಲಿ: ಆರಂಭಿಕ ಬ್ಯಾಟ್ಸ್ ಮನ್ ಕ್ವಿಂಟನ್ ಡಿಕಾಕ್(ಔಟಾಗದೆ 70, 50 ಎಸೆತ)ಅರ್ಧಶತಕದ ಕೊಡುಗೆಯ ಸಹಾಯದಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ನ 24ನೇ ಪಂದ್ಯವನ್ನು 7 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ.
ಗುರುವಾರ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ.
ನಾಯಕ ಸಂಜು ಸ್ಯಾಮ್ಸನ್(42), ಜೋಸ್ ಬಟ್ಲರ್(41), ಶಿವಂ ದುಬೆ(35) ಹಾಗೂ ಜೈಸ್ವಾಲ್(32)ಎರಡಂಕೆಯ ಸ್ಕೋರ್ ಗಳಿಸಿದರು. ರಾಹುಲ್ ಚಹಾರ್(2-33)ಎರಡು ವಿಕೆಟ್ ಪಡೆದರು.
ಗೆಲ್ಲಲು ಸವಾಲಿನ ಮೊತ್ತ ಬೆನ್ನಟ್ಟಿದ್ದ ಮುಂಬೈ 18.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ತಾನಾಡಿದ ಆರನೇ ಪಂದ್ಯದಲ್ಲಿ ಮೂರನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಕ್ವಿಂಟನ್ ಡಿಕಾಕ್(ಔಟಾಗದೆ 70, 50 ಎಸೆತ, 6 ಬೌಂ.2 ಸಿ.) ಹಾಗೂ ಕೃನಾಲ್ ಪಾಂಡ್ಯ(39, 26 ಎಸೆತ, 2 ಬೌಂ., 2 ಸಿ.) ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು.
ರಾಜಸ್ಥಾನದ ಪರವಾಗಿ ಕ್ರಿಸ್ ಮೊರಿಸ್(2-33)ಯಶಸ್ವಿ ಪ್ರದರ್ಶನ ನೀಡಿದರು.