ಕೋವಿಡ್-19:ಹೋಮ್ ಐಸೊಲೇಷನ್ ಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ

ಹೊಸದಿಲ್ಲಿ,ಎ.29: ಲಕ್ಷಣರಹಿತ ಕೋವಿಡ್-19 ಪ್ರಕರಣಗಳಲ್ಲಿ ಹೋಮ್ ಐಸೊಲೇಷನ್ಗಾಗಿ ಪರಿಷ್ಕೃತ ಮಾರ್ಗಸೂಚಿಯನ್ನು ಗುರುವಾರ ಬಿಡುಗಡೆಗೊಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಮನೆಯಲ್ಲಿ ಮನೆಯಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹೊಂದಿರಬಾರದು ಮತ್ತು ಅದನ್ನು ರೋಗಿಗೆ ನೀಡಬಾರದು ಎಂದು ಸ್ಪಷ್ಟಪಡಿಸಿದೆ. ಕೋವಿಡ್ ನ ಯಾವುದೇ ಲಕ್ಷಣಗಳಿಲ್ಲದ ಮತ್ತು ಶೇ.94ಕ್ಕೂ ಹೆಚ್ಚು ಆಮ್ಲಜನಕ ಪೂರ್ಣತೆಯನ್ನು ಹೊಂದಿರುವವರನ್ನು ಲಕ್ಷಣರಹಿತ ರೋಗಿಗಳು ಎಂದು ಮಾರ್ಗಸೂಚಿಯಲ್ಲಿ ವ್ಯಾಖ್ಯಾನಿಸಲಾಗಿದೆ.
60 ವರ್ಷಕ್ಕೆ ಮೇಲ್ಪಟ್ಟವರು ಮತ್ತು ಇತರ ಕಾಯಿಲೆಗಳನ್ನು ಹೊಂದಿರುವ ರೋಗಿಗಳಿಗೆ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿರುವ ವೈದ್ಯಾಧಿಕಾರಿಯಿಂದ ಸೂಕ್ತ ವೌಲ್ಯಮಾಪನದ ಬಳಿಕವಷ್ಟೇ ಮನೆಗಳಲ್ಲಿ ಪ್ರತ್ಯೇಕವಾಗಿರಲು ಅವಕಾಶ ನೀಡಲಾಗುವುದು ಮತ್ತು ಎಚ್ಐವಿ,ಕಸಿ ಶಸ್ತ್ರಚಿಕಿತ್ಸೆಗೊಳಗಾದವರು ಮತ್ತು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಸೇರಿದಂತೆ ದುರ್ಬಲ ರೋಗ ನಿರೋಧಕ ಶಕ್ತಿಯುಳ್ಳವವರು ಹೋಮ್ ಐಸೊಲೇಷನ್ಗೆ ಅರ್ಹರಾಗುವುದಿಲ್ಲ ಎಂದು ನೂತನ ಮಾರ್ಗಸೂಚಿಯು ತಿಳಿಸಿದೆ.
ರೋಗಿಗಳು ಶೇ.94ಕ್ಕಿಂತ ಹೆಚ್ಚಿನ ಆಮ್ಲಜನಕ ಪರಿಪೂರ್ಣತೆಯನ್ನು ಹೊಂದಿರಬೇಕು. ಅದಕ್ಕಿಂತ ಕಡಿಮೆಯಾದರೆ ಅಥವಾ ಉಸಿರಾಟಕ್ಕೆ ತೊಂದರೆಯಾದರೆ ರೋಗಿಯು ಆಸ್ಪತ್ರೆಗೆ ದಾಖಲಾಗಬೇಕು ಎಂದು ಅದು ಹೇಳಿದೆ. ದಿನಕ್ಕೆರಡು ಬಾರಿ ಬಿಸಿನೀರಿನಿಂದ ಬಾಯಿ ಮುಕ್ಕಳಿಸುವಂತೆ ಮತ್ತು ಆವಿಯನ್ನು ಒಳಗೆಳೆದುಕೊಳ್ಳುವಂತೆ ಅದು ಸಲಹೆ ನೀಡಿದೆ.
ದಿನಕ್ಕೆ ನಾಲ್ಕು ಬಾರಿ ಪ್ಯಾರಾಸಿಟಮಲ್ 650 ಎಂಜಿ ಮಾತ್ರೆಯ ಗರಿಷ್ಠ ಡೋಸ್ನ ಬಳಿಕವೂ ಜ್ವರವು ನಿಯಂತ್ರಣಕ್ಕ ಬಾರದಿದ್ದರೆ ಸೂಕ್ತ ಪರ್ಯಾಯ ಔಷಧಿಗಾಗಿ ವೈದ್ಯರನ್ನು ಸಂಪರ್ಕಿಸಬೇಕು. ಅವರು ರೋಗಿಗೆ 3ರಿಂದ 5 ದಿನಗಳ ಕಾಲ ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿಗಳನ್ನು ಶಿಫಾರಸು ಮಾಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ರೋಗಿಯು ಕುಟುಂಬದ ಇತರ ಸದಸ್ಯರ ಮತ್ತು ವಿಶೇಷವಾಗಿ ಹಿರಿಯ ನಾಗರಿಕರು ಹಾಗೂ ಇತರ ಅನಾರೋಗ್ಯಗಳಿರುವವರ ಸಂಪರ್ಕಕ್ಕೆ ಬಾರದೆ ಪ್ರತ್ಯೇಕ ಕೋಣೆಯಲ್ಲಿರಬೇಕು. ರೋಗಿಯು ಸದಾ ಮೂರು ಪದರಗಳ ವೈದ್ಯಕೀಯ ಮಾಸ್ಕ್ ಧರಿಸಿರಬೇಕು. ಎಂಟು ಗಂಟೆಗಳ ಬಳಿಕ ಅಥವಾ ಅದಕ್ಕೂ ಮೊದಲೇ ಒದ್ದೆಯಾದರೆ ಅಥವಾ ಕೊಳೆಯಾದರೆ ಅದನ್ನು ವರ್ಜಿಸಬೇಕು.
ರೋಗಿಯ ಕಾಳಜಿಯನ್ನು ವಹಿಸಿರುವ ವ್ಯಕ್ತಿ ಕೋಣೆಯನ್ನು ಪ್ರವೇಶಿಸುವುದಿದ್ದಲ್ಲಿ ಇಬ್ಬರೂ ಎನ್ 95 ಮಾಸ್ಕ್ ಧರಿಸುವುದು ಉತ್ತಮ. ಮಾಸ್ಕ್ಗಳನ್ನು 1 ಶೇಕಡಾ ಸೋಡಿಯಂ ಹೈಪೊಕ್ಲೋರೈಟ್ನಿಂದ ಸೋಂಕುಮುಕ್ತಗೊಳಿಸಿದ ಬಳಿಕವೇ ವಿಲೇವಾರಿ ಮಾಡಬೇಕು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗೆ ಅನುಗುಣವಾಗಿ ಜೈವಿಕವೈದ್ಯಕೀಯ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಬೇಕು ಎಂದು ಆರೋಗ್ಯ ಸಚಿವಾಲಯವು ಶಿಫಾರಸು ಮಾಡಿದೆ.