ಆಯುಷ್-64 ಔಷಧ ಲಘು ಕೋವಿಡ್ ಸೋಂಕಿಗೆ ಪರಿಣಾಮಕಾರಿ: ಸಚಿವಾಲಯ

ಹೊಸದಿಲ್ಲಿ, ಎ. 28: ಆಯುರ್ವೇದಿಕ್ ವಿಜ್ಞಾನಗಳಲ್ಲಿ ಸಂಶೋಧನೆಯ ಕೇಂದ್ರ ಮಂಡಳಿ ಅಭಿವೃದ್ಧಿಗೊಳಿಸಿದ ಬಹು ಗಿಡಮೂಲಿಕೆಗಳ ಸಂಯೋಜಿತ ಔಷಧ ಆಯುಷ್-64 ಸೌಮ್ಯದಿಂದ ಮಧ್ಯಮದ ವರೆಗಿನ ಕೋವಿಡ್-19 ಸೋಂಕು ಪ್ರಕರಣಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಕಂಡು ಬಂದಿದೆ ಎಂದು ಆಯುಷ್ ಸಚಿವಾಲಯ ಗುರುವಾರ ಹೇಳಿದೆ.
ಆರಂಭದಲ್ಲಿ ಆಯುಷ್-64ನ್ನು 1980ರಲ್ಲಿ ಮಲೇರಿಯಾ ರೋಗಕ್ಕಾಗಿ ಅಭಿವೃದ್ಧಿಪಡಿಸಲಾಗಿತ್ತು. ಇದನ್ನು ಈಗ ಕೋವಿಡ್-19ಗೆ ಮರು ರೂಪಿಸಲಾಗಿದೆ. ಆಯುಷ್-64ನ ಟ್ರಯಲ್ ಅನ್ನು ಲಕ್ನೋದ ಕೆಜಿಎಂಯು, ವಾರ್ಧಾದ ಡಿಎಂಐಎಂಎಸ್ ಹಾಗೂ ಮುಂಬೈಯ ಬಿಎಂಸಿ ಕೋವಿಡ್ ಸೆಂಟರ್ನಲ್ಲಿ ನಡೆಸಲಾಗಿದೆ. ಪ್ರತಿ ಸಂಸ್ಥೆಯಲ್ಲಿ 70 ಮಂದಿ ಅಭ್ಯರ್ಥಿಗಳು ಪಾಲ್ಗೊಂಡಿದ್ದರು ಎಂದು ಆಯುಷ್ ಸಚಿವಾಲಯ-ಸಿಎಸ್ಐಆರ್ ಸಹಭಾಗಿತ್ವದ ಮುಖ್ಯ ವೈದ್ಯಕೀಯ ನಿರ್ದೇಶಕ, ಸಂಯೋಜಕ ಡಾ. ಅರವಿಂದ ಚೋಪ್ರಾ ಹೇಳಿದ್ದಾರೆ.
ಸೌಮ್ಯದಿಂದ ಮಧ್ಯಮದ ವರೆಗಿನ ಕೋವಿಡ್ ಸೋಂಕಿನ ಪ್ರಕರಣಗಳ ಚಿಕಿತ್ಸೆಗೆ ಆಯುಷ್-64 ಅನ್ನು ಬಳಸಬಹುದು ಎಂಬುದಕ್ಕೆ ಔಷಧದ ಟ್ರಯಲ್ನಲ್ಲಿ ಗಣನೀಯ ಪುರಾವೆಗಳು ಸಿಕ್ಕಿದರೂ ಈ ಔಷಧ ತೆಗೆದುಕೊಂಡ ರೋಗಿಗಳಲ್ಲಿ ರೋಗ ಉಲ್ಬಣವಾಗುತ್ತಿದೆಯೇ ಎಂದು ಗುರುತಿಸಲು ನಿಗಾ ವಹಿಸುವ ಅಗತ್ಯತೆ ಇದೆ ಎಂದು ಡಾ. ಚೋಪ್ರಾ ಹೇಳಿದ್ದಾರೆ.





