ಕೋವಿಡ್ ಕರ್ಫ್ಯೂ; ಶೌಚಕ್ಕೆ ನೀರಿಲ್ಲ, ಹಳಸಿದ ಅನ್ನವೇ ಗತಿ : ತಮಿಳುನಾಡಿನ ವಲಸೆ ಕಾರ್ಮಿಕನ ಅಳಲು

ಸಾಂದರ್ಭಿಕ ಚಿತ್ರ
ಮಂಗಳೂರು, ಎ.29: ಈ ಕೊರೋನ ಯಾರ್ಯಾರಿಗೋ ಬರುತ್ತಿದೆ. ನಮ್ಮಂತಹವರಿಗೆ ಬಂದಿದ್ದರೆ ನಾವಾದರು ಮೇಲೆ ಹೋಗುತ್ತಿದ್ದೆವು. ನಮಗೆ ಈ ಕಷ್ಟ ತಪ್ಪುತ್ತಿತ್ತು. ಕೊರೋನ ಸೋಂಕು ತಡೆಯಲು ಕರ್ಫ್ಯೂ ಅಂತೆ, ಲಾಕ್ಡೌನ್ ಅಂತೆ. ಆದರೆ ನನ್ನಂತಹ ವಲಸೆ ಕಾರ್ಮಿಕನ ಗೋಳು ಕೇಳುವವರು ಯಾರು? ನಮಗೆ ಇಲ್ಲಿ ಕುಡಿಯಲು ನೀರಿಲ್ಲ, ಶೌಚಕ್ಕೂ ನೀರಿಲ್ಲ. ಹಳಸಿದ ಅನ್ನವನ್ನೇ ತಿನ್ನುವ ಗತಿ ಬಂದಿದೆ...
ಹೀಗೆ ಸಾಗುತ್ತಿದೆ ತಮಿಳುನಾಡಿನನ ಅಶೋಕ್ ಕುಮಾರ್ ಎಂಬ ವಲಸೆ ಕಾರ್ಮಿಕನ ನೋವು, ಹತಾಶೆ ತುಂಬಿದ ಮಾತು.
ಗುರುವಾರ ಬೆಳಗ್ಗೆ ನಗರದ ಸೆಂಟ್ರಲ್ ಮಾರ್ಕೆಟ್ ಬಳಿಯ ರಸ್ತೆಯಲ್ಲಿ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಲು ಸಿಕ್ಕಿದ ಅಶೋಕ್ ಕುಮಾರ್ ‘ನಾನು ಮಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದು 13 ವರ್ಷವಾಗಿದೆ. ಪತ್ನಿ ಮತ್ತು ಮೂರು ಮಕ್ಕಳನ್ನು ಕೂಲಿ ಕೆಲಸ ಮಾಡಿ ಸಾಕುತ್ತಿದ್ದೆ. ಇದೀಗ ಕರ್ಫ್ಯೂ ನಿಂದಾಗಿ ನಾವು ಬೀದಿಗೆ ಬಂದು ಬಿಟ್ಟಿದ್ದೇವೆ. ಕಳೆದ ವರ್ಷ ಕೊರೋನ-ಲಾಕ್ಡೌನ್ ಆದಾಗಲೂ ನಾನು ಇಲ್ಲೇ ಇದ್ದೆ. ಆದರೆ ಈ ಬಾರಿ ಆರಂಭದಲ್ಲೇ ನಮಗೆ ಕಷ್ಟ ಎದುರಾಗಿದೆ. ಮೈಯಲ್ಲಿ ಶಕ್ತಿ ಇದ್ದರೂ ಇಲ್ಲಿನ ಸರಕಾರದ ನಿಯಮದಿಂದ ಕೆಲಸ ಮಾಡಲು ಸಾಧ್ಯವಿಲ್ಲದಂತಾಗಿದೆ. ತವರೂರಿಗೆ ಹೋಗೋಣ ಅಂದರೆ ಕೈಯಲ್ಲಿ ಕಾಸಿಲ್ಲ, ಆಧಾರ್ ಬೇಕಂತೆ. ನಮ್ಮ ತಂದೆ-ತಾಯಿಯ ಹೆಸರೇ ನಮಗೆ ಗೊತ್ತಿಲ್ಲ. ಇನ್ನು ನಮಗೆ ಆಧಾರ್ ಎಲ್ಲಿ ಸಿಗುತ್ತದೆ ?. ನಾನು ಮಾತ್ರವಲ್ಲ ನನ್ನಂತೆ ನೂರಾರು ಮಂದಿ ಇಲ್ಲಿದ್ದೇವೆ. ಯಾವ ಸರಕಾರವೂ ನಮ್ಮನ್ನು ಕೇಳುವುದೇ ಇಲ್ಲ’ ಎಂದು ಅಳಲು ತೋಡಿಕೊಂಡರು.
ಲಾಕ್ಡೌನ್ ಬಳಿಕ ನಮಗೆ ದಿಕ್ಕೇ ತೋಚುತ್ತಿಲ್ಲ. ಊಟ ಇಲ್ಲ, ಸ್ನಾನಕ್ಕೆ, ಶೌಚಕ್ಕೆ, ಕುಡಿಯಲು ಕೂಡ ನೀರಿಲ್ಲದೆ ಬೀದಿಗೆ ಬಿದ್ದಿದ್ದೇವೆ. 10 ಗಂಟೆಯಾಗುವಾಗ ಎಲ್ಲಾ ಬಂದ್ ಆಗಿರುತ್ತದೆ. ಆ ಬಳಿಕ ನಾವು ಏನು ಮಾಡಬೇಕು ಅಂತ ನೀವೇ ಹೇಳಿ ? ಮಾರ್ಕೆಟ್ ರಸ್ತೆಯಲ್ಲಿ ಎಸೆದ ತರಕಾರಿಯನ್ನು ಹೆಕ್ಕಿ ತಂದು ರಸ್ತೆಯಲ್ಲೇ ಒಲೆ ಹಚ್ಚಿ ಬೇಯಿಸುತ್ತೇವೆ. ಇದು ನೋಡಿ, ನಿನ್ನೆಯ ಹಳಸಿದ ಅನ್ನ. ಅದನ್ನೇ ಬೇಯಿಸಿ ತಿನ್ನುತ್ತಿದ್ದೇವೆ. ಪೊಲೀಸರು ಆಗಾಗ ಬಂದು ನಮ್ಮನ್ನು ದಬಾಯಿಸುತ್ತಾರೆ. ಕೆಳಜಾತಿಯಲ್ಲಿ ಹುಟ್ಟಿದ ಕಾರಣಕ್ಕೋ ಏನೋ, ನಮ್ಮ ಕಷ್ಟವನ್ನು ಯಾರೂ ಕೇಳುವುದಿಲ್ಲ. ಉಸಿರು ಇರುವವರೆಗೆ ಬದುಕುವುದಕ್ಕಾಗಿ ದಿನದೂಡಲು ಹೆಣಗಾಡುತ್ತಿದ್ದೇವೆ. ನನ್ನ ಇಬ್ಬರು ಮಕ್ಕಳು ಊರಲ್ಲೇ ಇದ್ದಾರೆ. ಅಲ್ಲಿಗೆ ಹೋಗಲು ನಮಗೆ ಯಾರಾದರು ಸಹಾಯ ಮಾಡಿದರೆ ನಾವು ಸಂತೋಷದಿಂದ ಹೋಗುತ್ತಿದ್ದೆವು ಎಂದು ಅಶೋಕ್ ಕುಮಾರ್ ಹೇಳಿದರು.
ಒಟ್ಟಿನಲ್ಲಿ ಕೊರೋನ 2ನೆ ಅಲೆಯ ಪರಿಣಾಮವು ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಡುತ್ತಿವೆ. ಇಂತಹ ಕಳವಳಕಾರಿ ಸಂಗತಿ ಬೆಳಕಿಗೆ ಬರುತ್ತಿದ್ದರೂ ಕೂಡ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹೇಳಿಕೊಳ್ಳುತ್ತಿರುವುದು ವಿಪರ್ಯಾಸ.







