ಖರಗ್ಪುರ ಐಐಟಿಯಲ್ಲಿ ಜಾತಿ ತಾರತಮ್ಯ: ಪ್ರಾಧ್ಯಾಪಕಿ ಸೀಮಾ ಸಿಂಗ್ ಅಮಾನತಿಗೆ 800ಕ್ಕೂ ಅಧಿಕ ಹಳೇ ವಿದ್ಯಾರ್ಥಿಗಳ ಆಗ್ರಹ

ಹೊಸದಿಲ್ಲಿ, ಎ. 28: ಕೆಲವು ದಿನಗಳ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಆನ್ಲೈನ್ ತರಗತಿಯಲ್ಲಿ ಪ್ರಾದ್ಯಾಪಕಿಯೊಬ್ಬರು ವಿದ್ಯಾರ್ಥಿಗಳನ್ನು ನಿಂದಿಸಿದ ಹಾಗೂ ಕಿರುಚಾಡಿದ ವೀಡಿಯೊ ವೈರಲ್ ಆದ ಬಳಿಕ ಐಐಟಿಗಳ 800ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ಖರಗ್ಪುರ ಐಐಟಿಯ ನಿರ್ದೇಶಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಖರಗ್ಪುರ, ಬಾಂಬೆ, ಮದ್ರಾಸ್ ಹಾಗೂ ರೂರ್ಕಿ ಸೇರಿದಂತೆ ಭಾರತದ ವಿವಿಧ ಐಐಟಿ ಶಾಖೆಗಳ ಹಳೇ ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ. ಇಂಗ್ಲೀಷ್ ಪೂರ್ವಸಿದ್ಧತಾ ತರಗತಿಗೆ ಹಾಜರಾದ ವಿದ್ಯಾರ್ಥಿಗಳೊಂದಿಗೆ ಪ್ರಾದ್ಯಾಪಕಿ ಸೀಮಾ ಸಿಂಗ್ ಅವರ ನಡವಳಿಕೆ ಬಗ್ಗೆ ಹಳೇ ವಿದ್ಯಾರ್ಥಿಗಳು ವಿರೋಧ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ.
ಪೂರ್ವಸಿದ್ಧತಾ ಕೋರ್ಸ್ ಒಂದು ವರ್ಷದ ಕೋರ್ಸ್. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ ಹಾಗೂ ಭಿನ್ನ ಸಾಮಥ್ಯದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗಾಗಿ ಐಐಟಿ ಈ ಕೋರ್ಸ್ ಅನ್ನು ನಡೆಸುತ್ತಿದೆ. ತರಗತಿಯಲ್ಲಿ ಪ್ರಾದ್ಯಾಪಕಿ ವಿದ್ಯಾರ್ಥಿಯೊಬ್ಬರ ಹೆಸರು ಹಿಡಿದು ಕರೆಯುವ, ಕೂಗಾಡುವ ಹಾಗೂ ನಿಂದಿಸುವ ಮೂರು ವೀಡಿಯೊ ತುಣುಕುಗಳು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿತ್ತು. ಖರಗ್ಪುರ ಐಐಟಿ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಹಳೇ ವಿದ್ಯಾರ್ಥಿಗಳು, ‘‘ಐಐಟಿಗಳು ಈಗಾಗಲೇ ದಲಿತರಿಗೆ, ಆದಿವಾಸಿಗಳಿಗೆ ಹಾಗೂ ಹಿಂದುಳಿದ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಕುಖ್ಯಾತ ಸ್ಥಳವಾಗಿದೆ. ಪ್ರಾಧ್ಯಾಪಕಿ ತಪ್ಪೆಸಗಿರುವುದು, ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವುದು ಹಾಗೂ ವಿವೇಚನಾರಹಿತವಾಗಿ ನಿಂದಿಸಿರುವುದು ವೀಡಿಯೊದಿಂದ ಸಾಬೀತಾಗಿದೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ’’ ಎಂದು ಹೇಳಿದ್ದಾರೆ.
ಸೀಮಾ ಸಿಂಗ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು ಹಾಗೂ ಅವರಿಂದ ಬಲಿಪಶುಗಳಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ಹಳೇ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ಮಣಿಂದ್ರಾ ಅಗರ್ವಾಲ್ (ಐಐಟಿ ಕಾನ್ಪುರದ ಪ್ರಾದ್ಯಾಪಕ), ಶೈಲೇಂದ್ರ ಗಾಂಧಿ, ವೇಣು ಮಾಧವ ಗೋವಿಂದ (ಐಐಎಸ್, ಬೆಂಗಳೂರು), ಮೋಹನ್ ಜೆ. ದತ್ತಾ (ಮೆಸ್ಸಿ ವಿಶ್ವವಿದ್ಯಾನಿಲಯ) ಮೊದಲಾದ ಪ್ರಮುಖರು ಸೇರಿದ್ದಾರೆ.







