ದೇಶದಲ್ಲಿ ಒಂದೇ ದಿನ ನಾಲ್ಕು ಲಕ್ಷದ ಸನಿಹಕ್ಕೆ ಕೋವಿಡ್-19 ಸೋಂಕು

ಹೊಸದಿಲ್ಲಿ : ದೇಶದಲ್ಲಿ ಸತತ ಒಂಬತ್ತನೇ ದಿನ ಮೂರು ಲಕ್ಷಕ್ಕಿಂತ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ದೈನಿಕ ಪ್ರಕರಣಗಳ ಸಂಖ್ಯೆ ಗುರುವಾರ ನಾಲ್ಕು ಲಕ್ಷದ ಸನಿಹಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,86,693 ಪ್ರಕರಣಗಳು ವರದಿಯಾಗಿದ್ದು, 3502 ಮಂದಿ ಜೀವ ಕಳೆದುಕೊಂಡಿದ್ದಾರೆ.
ದೇಶದಲ್ಲಿ ಏಳು ದಿನಗಳ ಸರಾಸರಿ ಪ್ರಕರಣ ಮತ್ತು ತಪಾಸಣೆಯನ್ನು ಆಧರಿಸಿ ಧನಾತ್ಮಕತೆ ಪ್ರಮಾಣ ಶೇಕಡ 21ರಷ್ಟಿದೆ. ಅಂದರೆ ಪರೀಕ್ಷೆಗೆ ಒಳಪಡಿಸಿದ 100 ಮಂದಿಯಲ್ಲಿ 21 ಜನರಲ್ಲಿ ಸೋಂಕು ಕಂಡುಬಂದಿದೆ. ಹಲವು ಸೋಂಕು ಪ್ರಕರಣಗಳನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎನ್ನುವುದನ್ನು ಇದು ದೃಢಪಡಿಸುತ್ತದೆ.
ದೇಶದಲ್ಲಿ ವರದಿಯಾಗುತ್ತಿರುವ ಒಟ್ಟು ಪ್ರಕರಣಗಳಿಗಿಂತ ಐದು ಪಟ್ಟು ಅಧಿಕ ಪ್ರಕರಣಗಳು ಇರಬಹುದು ಎಂದು ಡಾ.ದೇವಿ ಶೆಟ್ಟಿ ಸೇರಿದಂತೆ ಹಲವು ಮಂದಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಎ. 6ರಂದು ದೈನಿಕ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದು, ಇದೀಗ ನಾಲ್ಕು ಲಕ್ಷದ ಸನಿಹಕ್ಕೆ ಬಂದಿದೆ. ಎ. 13ರಂದು ಗರಿಷ್ಠ ಸಾವಿನ ಸಂಖ್ಯೆ ದಾಖಲಾಯಿತು. ಸೋಂಕು ಪ್ರಕರಣಗಳ ಸಂಖ್ಯೆ ಎ. 6ರಂದು 1.15 ಲಕ್ಷ ಇದ್ದರೆ, ಎ. 13ರಂದು ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದೆ. ಅಂತೆಯೇ ಎ. 15ರಂದು ಸೋಂಕು ಪ್ರಕರಣಗಳ ಸಂಖ್ಯೆ 2 ಲಕ್ಷ ದಾಟಿದರೆ, ಸಾವಿನ ಸಂಖ್ಯೆ ಎ. 20ರಂದು 2 ಸಾವಿರದ ಗಡಿ ದಾಟಿದೆ. ಎ. 21ರಂದು ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿದಾಟಿದರೆ, ಎ. 27ರಂದು ಸಾವಿನ ಸಂಖ್ಯೆ 3 ಸಾವಿರಕ್ಕಿಂತ ಅಧಿಕ ದಾಖಲಾಗಿದೆ. ಅಂದರೆ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಗುರುವಾರ ಅತ್ಯಧಿಕ ಅಂದರೆ 66,159 ಸೋಂಕು ಪ್ರಕರಣಗಳು ವರದಿಯಾಗಿದ್ದರೆ, ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ 30-40 ಸಾವಿರ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರ ರಾಜಧಾನಿ 24,235 ಪ್ರಕರಣಗಳೊಂದಿಗೆ ಐದನೇ ಸ್ಥಾನದಲ್ಲಿದೆ.







