ನಾಗರಿಕರು ಸಾಮಾಜಿಕ ಮಾಧ್ಯಮದಲ್ಲಿ ಕುಂದುಕೊರತೆ ಹಂಚಿಕೊಳ್ಳುವುದಕ್ಕೆ ತಡೆ ಹೇರಬಾರದು: ಸುಪ್ರೀಂಕೋರ್ಟ್

ಹೊಸದಿಲ್ಲಿ: ನಾಗರಿಕರು ತಮ್ಮ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದರೆ ಯಾವುದೇ ರಾಜ್ಯವು ಮಾಹಿತಿಯನ್ನು ತಡೆ ಹಿಡಿಯಬಾರದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ದೇಶಾದ್ಯಂತ ಕಂಡು ಕೇಳರಿಯದ ರೀತಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹಾಸಿಗೆಗಳು ಹಾಗೂ ಆಕ್ಸಿಜನ್ ಕೊರತೆ, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಆಸ್ಪತ್ರೆಗಳ ಇತ್ಯಾದಿಗಳ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕುವ ನಾಗರಿಕರ ವಿರುದ್ದ ಯಾವುದೇ ಕ್ರಮಕೈಗೊಳ್ಳದಂತೆ ಡಿಜಿಪಿಗಳಿಗೆ ಒಂದು ಸಂದೇಶ ಜೋರಾಗಿ ಹಾಗೂ ಸ್ಪಷ್ಟವಾಗಿ ತಿಳಿಸಲಿ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ನಾಗರಿಕ ಅಥವಾ ನ್ಯಾಯಾಧೀಶನಾಗಿ ನನಗೆ ಇದು ಗಂಭೀರ ಕಾಳಜಿಯಾಗಿದೆ. ನಾಗರಿಕರು ತಮ್ಮ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂವಹನ ಮಾಡಿದರೆ, ನಾವು ಮಾಹಿತಿಯನ್ನು ತಡೆಯಲು ಬಯಸುವುದಿಲ್ಲ. ನಾಗರಿಕರ ಧ್ವನಿಯನ್ನು ನಾವು ಕೇಳೋಣ. ನಾವೀಗ ಮಾನವೀಯ ಬಿಕ್ಕಟ್ಟಿನಲ್ಲಿದ್ದು, ಈ ವೇಳೆ ಹಾಸಿಗೆಗಳು ಅಥವಾ ಆಕ್ಸಿಜನ್ ಬಯಸುವ ಯಾವುದೇ ನಾಗರಿಕನಿಗೆ ಕಿರುಕುಳ ನೀಡಿದರೆ ನಾವು ಅದನ್ನು ಅವಮಾನ ಎಂದು ಪರಿಗಣಿಸುತ್ತೇವೆ ಎಂದು ಶುಕ್ರವಾರ ವಿಚಾರಣೆಯ ಸಂದರ್ಭದಲ್ಲಿ ಜಸ್ಟಿಸ್ ಡಿ.ವೈ. ಚಂದ್ರಚೂಡ್ ಒತ್ತಿ ಹೇಳಿದರು.