ವ್ಯಾಪಕಗೊಳ್ಳುತ್ತಿರುವ ಕೋವಿಡ್ : 12 ಸೂತ್ರಗಳ ಅಳವಡಿಕೆಗೆ ದ.ಕ. ಜಿಲ್ಲಾ ಕಾಂಗ್ರೆಸ್ ಒತ್ತಾಯ
ಮಂಗಳೂರು, ಎ. 30: ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು 12 ಅಂಶಗಳನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಮಾಜಿ ಸಚಿವ ರಮಾನಾಥ ರೈ ಹಾಗೂ ದ.ಕ. ಜಿಲ್ಲಾ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ಜೆ.ಆರ್. ಲೋಬೋ ನೇತೃತ್ವದಲ್ಲಿ ಇಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ಮನವಿ ಸಲ್ಲಿಸಲಾಯಿತು.
ದ.ಕ. ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಸರಕಾರದ ವತಿಯಿಂದ ಕನಿಷ್ಠ 1000 ವೆಂಟಿಲೇಟರ್ ಹಾಗೂ 10,000 ಬೆಡ್‌ಗಳನ್ನು ವ್ಯವಸ್ಛಥೆ ಮಾಡಬೇಕು. ಎಲ್ಲಾ ಕೋವಿಡ್ ರೋಗಿಗಳಿಗೆ ಸರಕಾರದ ವತಿಯಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳ ಲಭ್ಯವಿಲ್ಲದಿರುವಲ್ಲಿ ಅಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಹಾಸ್ಟೆಲ್, ಶಾಲೆ, ಹಾಲ್‌ಗಳಲ್ಲಿ ಈಗಿನಿಂದಲೇ ವ್ಯವಸ್ಥೆಗೊಳಿಸಬೇಕು.
ಕೋವಿಡ್ ರೋಗಿಗಳ ಚಿಕಿತ್ಸೆಗೆ ವೈದ್ಯರು, ನರ್ಸ್‌ಗಳ ಕೊರತೆಯಾಗದಂತೆ ನಿವೃತ್ತ ವೈದ್ಯರನ್ನು ಕೆಲಸಕ್ಕೆ ಕರೆಸಿಕೊಳ್ಳಬೇಕು. ಸ್ನಾತಕೋತ್ತರ ಶಿಕ್ಷಣದ ವೈದ್ಯಕೀಯ ವಿದ್ಯಾರ್ಥಿಗಳನ್ನು, ಖಾಸಗಿ ವೈದ್ಯರನ್ನು ಕೆಲಸಕ್ಕೆ ನಿಯೋಜಿಸಬೇಕು. ನರ್ಸ್‌ಗಳನ್ನು ನಿಯೋಜಿಸಬೇಕು. ಪಲ್ಸ- ಆಕ್ಸಿಮೀಟರ್, ಆಕ್ಸಿಜನ್ ಸಿಲಿಂಡರ್‌ಗಳ ವ್ಯವಸ್ಥೆ ಮಾಡಿ ಎಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಾಗುವಂತೆ ಮಾಡಬೇಕು. ಕೋವಿಡ್ ಟೆಸ್ಟ್ ಖಾಸಗಿ ಆಸ್ಪತ್ರೆಗಳಲ್ಲಿಯೂ ಮಾಡಲು ಅವಕಾಶ ನೀಡಬೇಕು. ಟೆಸ್ಟ್ ರಿಸಲ್ಟ್ ಒಂದೇ ದಿನದಲ್ಲಿ ಸಿಗುವಂತಾಗಬೇಕು. ಎಲ್ಲಾ ಪಿಎಚ್‌ಸಿ, ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್, ಜನೌಷದಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಸಿಗೇಕು. ಜನರ ಜೀವ ಉಳಿಸುವ ಔಷಧ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಯಾವ ಆಸ್ಪತ್ರೆಗಳಲ್ಲಿ ಎಷ್ಟು ಕೋವಿಡ್ ವ್ಯವಸ್ಥೆ, ಬೆಡ್ ಲಭ್ಯತೆಯ ಮಾಹಿತಿಯನ್ನು ಪ್ರತಿದಿನ ಜನಸಾಮಾನ್ಯರಿಗೆ ನೀಡಬೇಕು.
ಪ್ರತಿ ಒಂದು ತಾಲೂಕಿಗೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಅದರ ಮಾಹಿತಿ ಸಾರ್ವಜನಿಕರಿಗೆ ಒದಗಿಸಬೇಕು. ರಾಜ್ಯಾದ್ಯಂತ ಹಾಗೂ ಅತರಂ ರಾಜ್ಯ ಪ್ರಯಾಣಕ್ಕೆ ಸರಕಾರ ನಿರ್ಬಂಧ ಹಾಕದಿರುವಾಗ ಚೆಕ್‌ಪೋಸ್ಟ್‌ಗಳಲ್ಲಿ ವಿನಾ ಕಾರಣ ಒಂದು ಊರಿ ನಿಂದ ಇನ್ನೊಂದು ಊರಿಗೆ ಹೋಗುವವರಿಗೆ ತೊಂದರೆ ನೀಡಬಾರದು. ರಕ್ತದ ಲಭ್ಯತೆಗೆ ಕೊರತೆ ಆಗದಂತೆ ಶಿಬಿರಗಳನ್ನು ಆಯೋಜಿಸಲು ಸಹಕಾರ ನೀಡಬೇಕು. ಖಾಸಿ ಆಸ್ಪತ್ರೆಗಳಲ್ಲಿ ಭಾರತ್ ಆಯುಷ್ಮಾನ್ ಕಾರ್ಡ್‌ಗೆ ಅವಕಾಶ ಕಲ್ಪಿಸಬೇಕು. ಅಗತ್ಯವಿರುವ ರೋಗಿಗಳಿಗೆ ಮನೆ ಗಳಲ್ಲಿ ಆಕ್ಸಿಜನ್ ಕಿಟ್ ಲಭ್ಯವಾಗಿಸಬೇಕು. ಆ್ಯಂಬುಲೆನ್ಸ್‌ಗಳ ಮಾಹಿತಿಯನ್ನು ಜನರಿಗೆ ಲಭ್ಯವಾಗುವಂತೆ ಒದಗಿಸಬೇಕು ಹಾಗೂ ದುಬಾರಿ ಬಾಡಿಗೆ ಪಡೆಯದಂತೆ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವ, ಮುಖಂಡರಾದ ಶಶಿಧರ ಹೆಗ್ಡೆ, ವಿನಯ್‌ರಾಜ್, ಭಾಸ್ಕರ ಕೆ, ಪ್ರಕಾಶ್ ಸಾಲ್ಯಾನ್, ಅಬ್ದುಲ್ ರವೂಫ್, ಟಿ.ಕೆ. ಸುಧೀರ್, ವಿಶ್ವಾಸ್ ಕುಮಾರ್ ದಾಸ್, ಮುಹಮ್ಮದ್ ಮೋನು, ಶಾಲೆಟ್ ಪಿಂಟೋ, ಲುಕ್ಮಾನ್ ಬಂಟ್ವಾಳ, ಸದಾಶಿವ ಉಳ್ಳಾಲ್, ಶಾಹುಲ್ ಹಮೀದ್, ಪ್ರಥ್ವಿರಾಜ್, ನವೀನ್ ಡಿಸೋಜಾ, ಶ್ಯಾಲೆಟ್ ಪಿಂಟೋ, ನೀರಜ್ ಪಾಲ್ ಇನ್ನಿತರರು ಉಪಸ್ಥಿತರಿದ್ದರು.







