ಭಟ್ಕಳ: ಮಳೆಗಾಳಿಗೆ ರಸ್ತೆಗೆ ಉರುಳಿದ ಮರಗಳು; ಎಸ್.ಡಿಪಿಐ, ಪಿಎಫ್ಐ ತಂಡದಿಂದ ನೆರವು

ಭಟ್ಕಳ: ಗುರುವಾರ ರಾತ್ರಿ ಗುಡುಗು, ಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ನಗರದ ಡಾರಂಟ ಹಾಗೂ ಸ್ಟೇಟ್ ಬ್ಯಾಂಕ್ ರೋಡ್ ನಲ್ಲಿ ಮರಗಳು ಧರೆಗೆ ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯೇಯ ಉಂಟಾಗಿತ್ತು.
ಕೂಡಲೇ ಕಾರ್ಯಪ್ರವೃತ್ತಗೊಂಡ ಎಸ್.ಡಿಪಿಐ ಮತ್ತು ಪಿಎಫ್ಐ ತಂಡದ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿ ಮರಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.
ಗುರುವಾರ ರಾತ್ರಿ ಗುಡುಗು ಮಿಂಚಿನ ಮಳೆಗೆ ಡಾರಂಟಾ ಭಾಗದಲ್ಲಿ 7 ವಿದ್ಯುತ್ ಕಂಬಗಳು, ಕೋಟೆಶ್ವರ ರಸ್ತೆಯಲ್ಲಿ 3, ಬಂದರ್ ರಸ್ತೆಯಲ್ಲಿ 1 ಹಾಗೂ ಮುಂಡಳ್ಳಿಯಲ್ಲಿ 1 ವಿದ್ಯುತ್ ಕಂಬ ಉರುಳಿದೆ. ಅಲ್ಲದೆ ಸಾಕಷ್ಟು ಮರಗಳು ಸಹ ಉರುಳಿ ಬಿದ್ದಿವೆ. ಮದೀನಾ ಕಾಲೋನಿಯ ಖಡಿ ಮಿಷನ್ ಬಳಿಯಲ್ಲಿರುವ ಹಳೆಯ ಮರವೊಂದು ಬೈಕ್ ಸವಾರನ ಮೇಲೆ ಬಿದ್ದಿದ್ದು ಅದೃಷ್ಟವಶಾತ್ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಎಲ್ಲ ಕಡೆಗಳಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ತಂಡದ ಸದಸ್ಯ ರಕ್ಷಣಾ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ತಂಡದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ತೌಫಿಖ್ ಬ್ಯಾರಿ, ಎಸ್ಡಿಪಿಐ ಭಟ್ಕಳ ಕ್ಷೇತ್ರದ ಅಧ್ಯಕ್ಷ ವಸೀಮ್ ಮನೆಗಾರ, ಕಾರ್ಯದರ್ಶಿ ರಫೀಖ್ ಶೇಖ್, ಪಿಎಫ್ಐ ಉ.ಕ ಜಿಲ್ಲಾ ಕೌನ್ಸಿಲ್ ಸದಸ್ಯ ಸಲ್ಮಾನ್ ಆಹ್ಮದ್, ಪಿ.ಎಫ್.ಐ ಭಟ್ಕಳ ಕಾರ್ಯದರ್ಶಿ ಝಮಾನ್ ಮತ್ತಿತರರು ಭಾಗವಹಿಸಿದ್ದರು.





