ಬೆ.6ರಿಂದ 10ಗಂಟೆವರೆಗೆ ಅಂಗಡಿ ತೆರೆಯಲು ಕೋರಿ ವ್ಯಾಪಾರಿಗಳಿಂದ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ

ಭಟ್ಕಳ: ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ಜೀವನಾವಶ್ಯಕ ವಸ್ತುಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಆದೇಶವಿದ್ದರೂ ಕೂಡ ಕೆಲ ಅಂಗಡಿಕಾರರು ಕದ್ದುಮುಚ್ಚಿ ವ್ಯಾಪಾರ ನಡೆಸುತ್ತಿದ್ದು ಅದನ್ನು ಗಮನಿಸದೆ ನಿರ್ಲಕ್ಷ ವಹಿಸಿದ್ದ ಭಟ್ಕಳ ಪುರಸಭೆ ಆಡಳಿತ ಸಾರ್ವಜನಿಕರಿಂದ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಶುಕ್ರವಾರ ಬೀದಿಗಿಳಿದು ಅಂಗಡಿಗಳನ್ನು ಮುಚ್ಚಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಪೇಟೆಯಲ್ಲಿರುವ ಚಪ್ಪಲಿ, ಬಟ್ಟೆ ಮತ್ತಿತರರ ಅತಿಅವಶ್ಯಕವಲ್ಲದ ಅಂಗಡಿಕಾರರು ತಮಗೂ ಕೂಡ ಬೆ.6ರಿಂದ 10 ಗಂಟೆ ವರೆಗೆ ಅಂಗಡಿ ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಒಪ್ಪದ ಅಧಿಕಾರಿಗಳು ಇದು ಸರ್ಕಾರದ ಆದೇಶವಾಗಿದ್ದು ಭಟ್ಕಳದಲ್ಲಿ ಇದರ ನಿಯಾಮವಳಿ ರೂಪಿಸುವುದಿಲ್ಲ ಎಂದು ತಿಳಿಸಿದ್ದು ಯಾವುದೇ ಕಾರಣಕ್ಕೂ ಇತರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಪ್ರಕಾರ ಪ್ರಕಣರ ದಾಖಲಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು. ಅಲ್ಲದೆ ಅಂಗಡಿಕಾರರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವುದಕ್ಕಾಗಿ ಲೌಡ್ ಸ್ಪೀಕರ್ ಮೂಲಕ ವ್ಯಾಪಕ ಪ್ರಚಾರವನ್ನು ನೀಡಲಾಗುತ್ತಿದೆ.
ಹಬ್ಬಕ್ಕೆಂದು ಮುಂಬೈ, ಬೆಂಗಳೂರು ಮೂಲಕ ಲಕ್ಷಾಂತರ ರೂಪಾಯಿ ಬಟ್ಟೆ, ಚಪ್ಪಲಿ ಮತ್ತಿತರ ವಸ್ತುಗಳು ಮುಂಗಡ ಹಣಕೊಟ್ಟು ಕರೀದಿಸಿದ್ದು ಈಗ ಕೋವಿಡ್ ಕರ್ಫ್ಯೂನಿಂದಾಗಿ ದೊಡ್ಡ ದೊಡ್ಡ ವ್ಯಾಪಾರಸ್ಥರು ಕೂಡ ಬೀದಿಗೆ ಬರುವಂತಾಗಿದೆ. ದಾಸ್ತಾನು ಮಾಡಿದ ಲಕ್ಷಾಂತರ ರೂ. ಬಂಡವಾಳ ಹೂಡಿದ ವಸ್ತುಗಳು ಸಕಾಲದಲ್ಲಿ ಗ್ರಾಹಕರಿಗೆ ತಲುಪಿಲ್ಲ ಎಂದಾದರೆ ವ್ಯಾಪಾರಸ್ಥ ತುಂಬಲಾರದ ನಷ್ಟವನ್ನು ಅನುಭವಿಸ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಲ ಸಮಯವಾದರೂ ವ್ಯಾಪಾರಕ್ಕೆ ಬಿಡುವು ನೀಡಬೇಕೆಂಬುವುದು ವ್ಯಾಪಾರಿಗಳ ವಾದ.
ಆದರೆ ಇತ್ತಿಚೆಗೆ ಬೆಂಗಳೂರು ಮತ್ತಿತರ ನಗರಗಳಿಂದ ಭಟ್ಕಳ ಬರುತ್ತಿರುವವರಿಂದ ಕೋವಿಡ್ ಸೋಂಕು ಬಲವಾಗಿ ಹರಡಿಕೊಳ್ಳುವ ಸಾಧ್ಯತೆ ಇದ್ದು ಇದಕ್ಕಾಗಿ ತಾಲೂಕಾಡಳಿತ ಎಲ್ಲ ರೀತಿಯ ಕಠಿಣ ಕ್ರಮಗಳನ್ನು ಜರಗಿಸಲು ಸಿದ್ದವಿದೆ. ಒಂದೆಡೆ ಈ ಸಾಂಕ್ರಮಿಕ ಮಹಾಮಾರಿ ಮನುಷ್ಯರನ್ನು ಅತ್ಯಂತ ಭಯಭೀತರನ್ನಾಗಿ ಮಾಡುತ್ತಿದ್ದರೆ ಮತ್ತೊಂದೆಡೆ ಲಾಕ್ಡೌನ್, ಕರ್ಫ್ಯೂ ನಂತಹ ಕಾನೂನುಗಳು ಮನುಷ್ಯನನ್ನು ಬದುಕಿರುವಾಗಲೇ ಸಾಯುವಂತೆ ಮಾಡುತ್ತಿವೆ ಎಂದು ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲ ಪ್ರಜ್ಞಾವಂತ ನಾಗರೀಕರು ಮಾತ್ರ ಬೇರೆ ರೀತಿಯಲ್ಲಿ ಯೋಚಿಸುತ್ತಿದ್ದು ಜೀವಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ. ಆದ್ದರಿಂದ ಕೋವಿಡ್ ತಡೆಗೆ ಕಠಿಣ ಕ್ರಮ ಜರಗಿಸುವುದರ ಜೊತೆಗೆ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜರಗಿಸುವುದು ಬಹು ಮುಖ್ಯವಾಗಿದೆ. ಹೊರ ಜಿಲ್ಲೆಗಳಿಂದ ಬರುತ್ತಿರುವವರಿಂದ ಕೋವಿಡ್ ವ್ಯಾಪಕವಾಗಿ ಹರಡುವ ಎಲ್ಲ ಸಾಧ್ಯತೆಗಳಿವೆ. ಈಗಾಗಲೆ ಹಲವಾರು ಮನೆಗಳಲ್ಲಿ ಜನರು ಜ್ವರ ಶೀತ ಕೆಮ್ಮು, ನೆಗಡಿ ಎಂದು ಹೇಳಿಕೊಂಡು ಔಷಧ ಅಂಗಡಿಗಳಿಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆ ಒಂದು ವೇಳೆ ಭಟ್ಕಳದಲ್ಲಿ ಕೋವಿಡ್ ಸ್ಪೋಟಗೊಂಡರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗದು ಹಾಗಾಗಿ ಯಾರಿಗೂ ವಿನಾಯಿತಿ ನೀಡದೆ ಸರ್ಕಾರದ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಬೇಕೆಂದು ತಾಲೂಕಾಡಳಿತವನ್ನು ಆಗ್ರಹಿಸಿದ್ದಾರೆ.







