ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹಿಸಿ: ಕೋಟ ಕರೆ

ಮಂಗಳೂರು, ಎ.30: ಜಿಲ್ಲೆಯ ಕೃಷಿ ಯೋಗ್ಯ ಭೂಮಿಗಳಲ್ಲಿ ಅದರಲ್ಲೂ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಅಧಿಕಾರಿಗಳು ಪ್ರೋತ್ಸಾಹ ನೀಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.
ಜಿಲ್ಲೆಯಲ್ಲಿ ಹಡೀಲು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಕುರಿತು ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಡಿಲು ಭೂಮಿಯನ್ನು ಗ್ರಾಮವಾರು ಗುರುತಿಸುವುದರೊಂದಿಗೆ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೂ ಮಾಲಕರಿಗೆ ಕಷಿೃ ಚಟುವಟಿಕೆ ಕೈಗೊಳ್ಳಲು ಪ್ರೇರಿಪಿಸಬೇಕು. ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳಿಗೆ ಯೋಗ್ಯವಾದ ಭೂಮಿಯನ್ನು ಹಡಿಲು ಬಿಟ್ಟಿರುವ ಬಗ್ಗೆ ವಾರದೊಳಗೆ ಸರ್ವೇ ಕಾರ್ಯ ನಡೆಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಡಿಲು ಬಿಟ್ಟಿರುವ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವುದರಿಂದ ನೀರು ಇಂಗಿ ಅಂತರ್ಜಲ ವೃದ್ಧಿಯಾಗಲು ಸಹಾಯವಾಗಲಿದೆ. ಕೃಷಿ ಚಟುವಟಿಕೆಗಳಲ್ಲಿ ಯಾಂತ್ರೀಕರಣ ಅಳವಡಿಸಿಕೊಳ್ಳುವುದರ ಮೂಲಕ ಕಡಿಮೆ ವೆಚ್ಚದಲ್ಲಿ ಬೆಳೆಗಳನ್ನು ಬೆಳೆದು ಕೃಷಿಯನ್ನು ಲಾಭದಾಯಕವಾಗಿ ಮಾಡಲು ಸಾಧ್ಯ. ಅಲ್ಲದೆ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಪಂ ಸಿಇಒ ಡಾ.ಕುಮಾರ್, ಶಾಸಕ ರಾಜೇಶ್ ನಾಯ್ಕ ಮತ್ತಿತ್ತರು ಉಪಸ್ಥಿತರಿದ್ದರು.
ಜಿಲ್ಲೆಯ 2.09 ಲಕ್ಷ ಕುಟುಂಬಗಳ ಪೈಕಿ 2.08 ಲಕ್ಷ ಭೂ ಹಿಡುವಳಿದಾರರು 1.78 ಲಕ್ಷ ಹೆಕ್ಟೇರ್ ಭೂಮಿಯನ್ನು ಹಿಡುವಳಿ ಹೊಂದಿದ್ದಾರೆ. ಕಳೆದ ಸಾಲಿನಲ್ಲಿ 37,817.50 ಎಕರೆ ಪ್ರದೇಶದಲ್ಲಿ 7.56,350 ಕ್ವಿಂಟಾಲ್ ಭತ್ತ ಬೆಳೆಯಲಾಗಿದೆ. ಮಂಗಳೂರು 2,125 ಹೆಕ್ಟೇರ್, ಬಂಟ್ವಾಳ 150 ಹೆಕ್ಟೇರ್, ಬೆಳ್ತಂಗಡಿ 85 ಹೆಕ್ಟೇರ್, ಪುತ್ತೂರು 20 ಹೆಕ್ಟೇರ್, ಸುಳ್ಯ 112.75 ಹೆಕ್ಟೇರ್ ಭತ್ತದ ಹಡಿಲು ಸಹಿತ ಜಿಲ್ಲೆಯಲ್ಲಿ ಭತ್ತದ ಹಡಿಲು ಭೂಮಿ 2,392.75 ಹೆಕ್ಟೇರ್ ಪ್ರದೇಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಎರಡು ವರ್ಷಕ್ಕೂ ಹೆಚ್ಚು ಕಾಲ ಕೃಷಿ ಭೂಮಿಯನ್ನು ಹಡಿಲು ಬಿಟ್ಟರೆ ಅಂತಹ ಕೃಷಿ ಭೂಮಿಯನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದಕ್ಕೆ ಯಾರೊಬ್ಬರೂ ಆಸ್ಪದ ನೀಡದೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.







