15 ವರ್ಷದಿಂದ ಇಂಟರ್ನೆಟ್ ನಲ್ಲಿರುವ ಬ್ರಿಟನ್ ಪ್ರಧಾನಿಯ ಫೋನ್ ನಂಬರ್ !

ಲಂಡನ್, ಎ. 30: ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ರ ವೈಯಕ್ತಿಕ ಫೋನ್ ಸಂಖ್ಯೆ 15 ವರ್ಷಗಳಿಂದಲೂ ಇಂಟರ್ನೆಟ್ನಲ್ಲಿದೆ ಎಂದು ಮಾಧ್ಯಮ ವರದಿಗಳು ಶುಕ್ರವಾರ ತಿಳಿಸಿವೆ. ಇದು ರಾಷ್ಟ್ರೀಯ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಈ ಫೋನ್ ಸಂಖ್ಯೆ 2006ರಲ್ಲಿ ಬೊರಿಸ್ ಜಾನ್ಸನ್ ಪ್ರತಿಪಕ್ಷ ಸಂಸದರಾಗಿದ್ದಾಗ ನೀಡಲಾಗಿದ್ದ ಪತ್ರಿಕಾ ಹೇಳಿಕೆಯೊಂದರಲ್ಲಿ ಕಾಣಿಸಿಕೊಂಡಿತ್ತು. ಅದೇ ಸಂಖ್ಯೆಯನ್ನು ಕನ್ಸರ್ವೇಟಿವ್ ಪಕ್ಷದ ನಾಯಕ ಈಗಲೂ ಬಳಸುತ್ತಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ತನ್ನ ಡೌನಿಂಗ್ ಸ್ಟ್ರೀಟ್ ಕಚೇರಿ-ನಿವಾಸದ ನವೀಕರಣಕ್ಕಾಗಿ ಭಾರೀ ಮೊತ್ತದ ಹಣ ಖರ್ಚು ಮಾಡಿದ್ದಾರೆ ಎಂಬ ಆರೋಪದಲ್ಲಿ ಬ್ರಿಟನ್ ಪ್ರಧಾನಿ ವಿಚಾರಣೆ ಎದುರಿಸುತ್ತಿರುವ ಸಮಯದಲ್ಲಿ ಈ ವಿಷಯ ಹೊರಬಿದ್ದಿದೆ. ಬ್ರಿಟನ್ ರಾಜಕಾರಣಿಗಳು ಮತ್ತು ಬೃಹತ್ ಕಂಪೆನಿಗಳ ನಡುವಿನ ಆತ್ಮೀಯ ಸಂಬಂಧ, ಅದರಲ್ಲೂ ಮುಖ್ಯವಾಗಿ ಕೈಗಾರಿಕೋದ್ಯಮಿ ಜೇಮ್ಸ್ ಡೈಸನ್ ಜೊತೆ ಜಾನ್ಸನ್ರ ಸಂದೇಶ ವಿನಿಮಯ ಈಗ ಹಗರಣದ ರೂಪ ಪಡೆದುಕೊಳ್ಳುತ್ತಿದೆ.
ವಿರೋಧಿ ದೇಶಗಳು ಮತ್ತು ಕ್ರಿಮಿನಲ್ ಗ್ಯಾಂಗ್ ಗಳು ಜಾನ್ಸನ್ ರ ಫೋನ್ ಸಂಖ್ಯೆಯನ್ನು ಪಡೆದುಕೊಂಡು, ಅವರ ಫೋನ್ನಲ್ಲಿರುವ ಇತರ ಸಂಪರ್ಕ ವಿವರಗಳನ್ನು ಪಡೆದುಕೊಂಡಿರಬಹುದು ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಪೀಟರ್ ರಿಕೆಟ್ಸ್ ಬಿಬಿಸಿಯೊಂದಿಗೆ ಮಾತನಾಡುತ್ತಾ ಹೇಳಿದರು.





