ಅಗ್ನಿಶಾಮಕ ಇಲಾಖೆಯ ನೇಮಕಾತಿ ಪ್ರಕ್ರಿಯೆ
ಉಡುಪಿ, ಎ.30: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆಯ ದೈಹಿಕ ಮತ್ತು ದೇಹದಾರ್ಢ್ಯತೆ ಪರೀಕ್ಷೆಯು ಫೆ.15ರಿಂದ ಎ.27 ರವರೆಗೆ ಬೆಂಗಳೂರಿನ ಆರ್.ಎ. ಮುಂಡ್ಕೂರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ನಡೆಯಿತು.
ಸರಕಾರದ ಆದೇಶದಂತೆ 2016-17ನೇ ಸಾಲಿನಲ್ಲಿ ಅಗ್ನಿಶಾಮಕ-660 ಹುದ್ದೆ, ಅಗ್ನಿಶಾಮಕ ಚಾಲಕ -176 ಹುದ್ದೆ ಮತ್ತು ಚಾಲಕ ತಂತ್ರಜ್ಞ -47 ಹುದ್ದೆ ಒಟ್ಟು 883 ಹುದ್ದೆಗೆ ಹಾಗೂ 2014-15 ಮತ್ತು 2015-16ನೇ ಸಾಲಿನ ನೇಮಕಾತಿಯಲ್ಲಿ ವಿವಿಧ ಕಾರಣಗಳಿಂದ ಬಾಕಿ ಉಳಿದ 387 ಹುದ್ದೆ ಮತ್ತು ಹೈದ್ರಾಬಾದ್- ಕರ್ನಾಟಕ ಪ್ರದೇಶದಲ್ಲಿ ಪ್ರಸ್ತುತ ಖಾಲಿ ಇರುವ ಅಗ್ನಿಶಾಮಕ ಠಾಣಾಧಿಕಾರಿ-10 ಹುದ್ದೆ, ಅಗ್ನಿಶಾಮಕ -239 ಹುದ್ದೆ, ಅಗ್ನಿಶಾಮಕ ಚಾಲಕ-28 ಹುದ್ದೆ ಮತ್ತು ಚಾಲಕ ತಂತ್ರಜ್ಞ -20 ಹುದ್ದೆ ಒಟ್ಟು 297 ಹುದ್ದೆಗಳು ಸೇರಿ ಒಟ್ಟು 1567 ಖಾಲಿ ಹುದ್ದೆಗಳಿಗೆ 1,65,354 ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ 1:5 ಅನುಪಾತದಂತೆ ಒಟ್ಟು 12,019 ಅಭ್ಯರ್ಥಿ ಗಳಿಗೆ ಕರೆ ಪತ್ರ ಕಳುಹಿಸಲಾಗಿದ್ದು, ಇವುಗಳಲ್ಲಿ 7,087 ಅಭ್ಯರ್ಥಿಗಳು ದೈಹಿಕ ಮತ್ತು ದೇಹದಾರ್ಢ್ಯತೆ ಪರೀಕ್ಷೆಗೆ ಹಾಜರಾಗಿದ್ದರು.
ಈ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆಯನ್ವಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪಾರದರ್ಶಕತೆಯಿಂದ ನೇರ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.





