ಕೊರೋನ ಸೋಂಕಿತರ ನೆರವಿಗಾಗಿ ಆ್ಯಂಬುಲೆನ್ಸ್ ಚಾಲಕರಾದ ನಟ ಅರ್ಜುನ್ ಗೌಡ

ಬೆಂಗಳೂರು, ಎ.30: ರಾಜ್ಯದಲ್ಲಿ ಕೊರೋನ ಸಂಕಷ್ಟದ ಸಮಯದಲ್ಲಿ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಮತ್ತು ಆಸ್ಪತ್ರೆಯಲ್ಲಿ ಬೆಡ್ ಸಿಗದ ಪ್ರಕರಣಗಳು ವರದಿಯಾಗುತ್ತಿದೆ. ಈ ನಡುವೆ 'ಯುವರತ್ನ' ಚಿತ್ರದಲ್ಲಿ ಅಭಿನಯಿಸಿದ್ದ ನಟ ಅರ್ಜುನ್ ಅವರು ಸ್ವತಃ ಆ್ಯಂಬುಲೆನ್ಸ್ ಚಾಲಕನಾಗುವ ಮೂಲಕ ಗಮನ ಸೆಳೆದಿದ್ದಾರೆ.
ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಅಭಿನಯಿಸಿದ್ದ ನಟ ಅರ್ಜುನ್ ಗೌಡ ಅವರು ತಾವೇ ಆ್ಯಂಬುಲೆನ್ಸ್ ಚಾಲಕನಾಗುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕೊರೋನ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಕೊರೋನದಿಂದ ಮೃತಪಟ್ಟ ರೋಗಿಗಳ ಶವವನ್ನು ಚಿತಾಗಾರಕ್ಕೆ ಕೊಂಡೊಯ್ಯುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜುನ್ ಗೌಡ ಅವರು, ಕೊರೋನದಿಂದ ಮೃತಪಟ್ಟ ಹಲವಾರು ಮಂದಿಯ ಅಂತ್ಯಕ್ರಿಯೆ ಮಾಡುವ ಮೂಲಕ ಸಹಾಯ ಮಾಡಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಇನ್ನು ಎರಡು ತಿಂಗಳ ಕಾಲ ನನ್ನ ಈ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.





