ರಕ್ತದಾನ ಶಿಬಿರ : ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಆರೋಪ

ಮಂಗಳೂರು, ಎ.30: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್, ಕೆಎಂಸಿ ಆಸ್ಪತ್ರೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಶುಕ್ರವಾರ ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಆದರೆ, ಈ ಶಿಬಿರದಲ್ಲಿ ಕೋವಿಡ್-19 ಮಾರ್ಗಸೂಚಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರಿಂದ ಉದ್ಘಾಟಿಸಲ್ಪಟ್ಟ ಈ ಶಿಬಿರದಲ್ಲಿ ಕೋವಿಡ್-19 ಮಾರ್ಗಸೂಚಿಯ ಉಲ್ಲಂಘಿಸಲ್ಪಟ್ಟಿರುವುದು ವಿಪರ್ಯಾಸ ಎಂಬ ಮಾತು ಕೇಳಿ ಬಂದಿದೆ. ಕೋವಿಡ್ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಬೇಕು ಎಂದು ತಜ್ಞ ವೈದ್ಯರ ಸಲಹೆಯಾಗಿದೆ. ಅದರಂತೆ ಶುಕ್ರವಾರ ನಡೆದ ಶಿಬಿರದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಆ ಪೈಕಿ ಹೆಚ್ಚಿನವರು ವಿದ್ಯಾರ್ಥಿಗಳು, ಯುವಕರು ಸೇರಿದ್ದಾರೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಪ್ರತಿ ವಾರ್ಡಿನಿಂದ ರಕ್ತದಾನಿಗಳನ್ನು ಕರೆದೊಯ್ಯಲು ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಸುರಕ್ಷಿತ ಅಂತರವೇ ಇರಲಿಲ್ಲ. ಮಾಸ್ಕ್ ಧರಿಸಿದ್ದರೂ ಕ್ರಮಬದ್ಧವಾಗಿರಲಿಲ್ಲ ಎಂಬ ಮಾತು ಕೇಳಿ ಬಂದಿದೆ.
ಒಂದೆಡೆ ಸರಕಾರ ಕೋವಿಡ್ 2ನೆ ಅಲೆಯ ತಡೆಗೆ ಕ್ರಮ ಜರುಗಿಸುತ್ತಿದ್ದರೆ ಇನ್ನೊಂದೆಡೆ ಸರಕಾರದ ಭಾಗವಾಗಿರುವ ಸಂಸದರು, ಶಾಸಕರು ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ಶಿಬಿರ ಆಯೋಜಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಕ್ತದ ಅಗತ್ಯವಿದೆ. ಹಾಗಂತ ಸುರಕ್ಷಿತ ಅಂತರ ಕಾಪಾಡದಿದ್ದರೆ ಹೇಗೆ ? ಜಿಲ್ಲಾಧಿಕಾರಿ ಮೌನ ತಾಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಸುಮಾರು 1 ಸಾವಿರ ಯುನಿಟ್ ಸಂಗ್ರಹವಾದ ಈ ಶಿಬಿರಕ್ಕೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಪ್ರಮುಖರಾದ ಹನುಮಂತ ಕಾಮತ್, ಟ್ರಸ್ಟಿನ ಪ್ರಮುಖರಾದ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಇಲೆಕ್ಟ್ರಿಕಲ್ ಕಂಪೆನಿ ನಿಗಮದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜಪ್ಪಿನಮೊಗರು,ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಲೀಲಾವತಿ ಪ್ರಕಾಶ್, ಕಾರ್ಪೋರೇಟರ್‌ಗಳಾದ ಪೂರ್ಣಿಮಾ, ರಮೇಶ್ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ ಮತ್ತಿತರರು ಸಾಕ್ಷಿಯಾದರು.








