ನಕಲಿ ರೆಮ್ಡೆಸಿವಿರ್ ಇಂಜೆಕ್ಷನ್ ಜಾಲ: ಮತ್ತಿಬ್ಬರು ಆರೋಪಿಗಳ ಬಂಧನ

ಹೊಸದಿಲ್ಲಿ, ಎ. 29: ನಕಲಿ ರೆಮ್ಡೆಸಿವಿರ್ ಇಂಜಕ್ಷನ್ ಉತ್ಪಾದಿಸುತ್ತಿದ್ದ ಉತ್ತರಾಖಂಡದ ಕೊಟ್ದವರ್ನಲ್ಲಿ ಕೈಗಾರಿಕೆ ಉತ್ಪಾದನಾ ಘಟಕವನ್ನು ಭೇದಿಸಿ ಐದು ಮಂದಿಯನ್ನು ಬಂಧಿಸಿದ ದಿನದ ಬಳಿಕ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಕಲಿ ರೆಮ್ಡೆಸಿವಿರ್ ಇಂಜೆಕ್ಷನ್ ಹಗರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ಬಂಧಿಸಲಾಗಿದೆ. ಈ ಜಾಲದ ರೂವಾರಿ ಬಿಫಾರ್ಮಾ ಪದವೀಧರ. ಆತ ತನ್ನ ಜಾಲವನ್ನು ದಿಲ್ಲಿ ಅಲ್ಲದೆ, ಮೂರಕ್ಕಿಂತಲೂ ಅಧಿಕ ಇತರ ರಾಜ್ಯಗಳಲ್ಲಿ ವಿಸ್ತರಿಸಿಕೊಂಡಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ನಕಲಿ ಇಂಜೆಕ್ಷನ್ ಅನ್ನು ಪ್ಯಾಕ್ ಮಾಡುವ ಹಾಗೂ ದಿಲ್ಲಿ, ಪಂಜಾಬ್ ಹಾಗೂ ಹರ್ಯಾಣಕ್ಕೆ ರಫ್ತು ಮಾಡುವ ಉತ್ತರಾಖಂಡ ಹಾಗೂ ಹರಿದ್ವಾರದಲ್ಲಿದ್ದ ರೆಮ್ಡಿಸಿವಿರ್ ಇಂಜೆಕ್ಷನ್ ಪ್ಯಾಕೇಜಿಂಗ್ ಘಟಕಕಕ್ಕೆ ದಾಳಿ ನಡೆಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ‘‘ದಂಧೆಕೋರರು 25 ಸಾವಿರದಿಂದ 45 ಸಾವಿರದ ವರೆಗೆ ನಕಲಿ ರೆಮ್ಡೆಸಿವಿರ್ ಇಂಜೆಕ್ಷನ್ ಅನ್ನು ಮಾರಾಟ ಮಾಡುತ್ತಿದ್ದರು. ದಿಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ಅವರು ಈಗಾಗಲೇ 2,000 ಇಂಜೆಕ್ಷನ್ ಅನ್ನು ಮಾರಾಟ ಮಾಡಿದ್ದಾರೆ’’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೋರ್ವರು ತಿಳಿಸಿದ್ದಾರೆ.