ಸ್ವಾಬ್ ಟೆಸ್ಟ್ ಪಡೆಯದೆ ನೆಗೆಟಿವ್ ವರದಿ ನೀಡುತ್ತಿದ್ದ ಆರೋಪ: ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.30: ಕೊರೋನವನ್ನೇ ಬಂಡವಾಳ ಮಾಡಿಕೊಂಡು ಸ್ವಾಬ್ ಟೆಸ್ಟ್ ಪಡೆಯದೇ 700 ರೂ.ಗಳನ್ನು ಪಡೆದು ಕೊರೋನ ನೆಗೆಟಿವ್ ವರದಿ ನೀಡುತ್ತಿದ್ದ ಇಬ್ಬರು ಖದೀಮರನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಕೆ.ಆರ್.ಪುರಂನಲ್ಲಿ ನಡೆದಿದೆ.
ಬಂಧಿತರನ್ನು ಚೌಡದೇನಹಳ್ಳಿಯ ಮುಖೇಶ್ ಸಿಂಗ್(25) ಹಾಗೂ ಹೊಸಹಳ್ಳಿಯ ನಾಗರಾಜು(39) ಎಂದು ಗುರುತಿಸಲಾಗಿದೆ. ವರ್ತೂರಿನ ಸರ್ಜಾಪುರ ರಸ್ತೆಯಲ್ಲಿ ಅಂಗಡಿ ಇಟ್ಟಿದ್ದ ಆರೋಪಿಗಳು, ಸ್ವಾಬ್ ಟೆಸ್ಟ್ ಪಡೆಯದೆ 700 ರೂ.ಗೆ ಕೊರೋನ ನೆಗೆಟಿವ್ ವರದಿ ನೀಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಕೂಡಲೇ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು ಜನ ಸಾಮಾನ್ಯರಂತೆ ತೆರಳಿ ಕೊರೋನ ವರದಿ ಕೇಳಿದ್ದಾರೆ.
ಈ ವೇಳೆ ಆರೋಪಿಗಳು ಸ್ವಾಬ್ ಪಡೆಯದೇ ನೆಗೆಟಿವ್ ವರದಿ ನೀಡಿದ್ದಾರೆ. ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಐದು ನೆಗೆಟಿವ್ ರಿಪೋರ್ಟ್ ಮತ್ತು ಮೊಬೈಲ್ಗಳನ್ನು ವಶಕ್ಕೆ ಪಡೆದು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಮುಖೇಶ್ ಸಿಂಗ್ ರಾಜಸ್ಥಾನ ಮೂಲದವನಾಗಿದ್ದು ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಈ ಕೃತ್ಯ ನಡೆಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.





