ಇ.ಡಿ.ಯಿಂದ ರೋಸ್ ವ್ಯಾಲಿ ಸಮೂಹದ 304 ಕೋಟಿ ರೂ. ಸೊತ್ತು ವಶ
ಹೊಸದಿಲ್ಲಿ, ಎ. 29: ಪೋಂಝಿ ಯೋಜನೆಗಳ ಮೂಲಕ ಹಣ ಸಂಗ್ರಹಿಸಿ ಅಕ್ರಮ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿ ರೋಸ್ ವ್ಯಾಲಿ ಕಂಪೆನಿಗಳ ಸಮೂಹದ 304 ಕೋಟಿ ರೂಪಾಯಿಯ ಸ್ಥಿರ ಹಾಗೂ ಚರ ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ)ದ ಹೇಳಿಕೆ ಶುಕ್ರವಾರ ತಿಳಿಸಿದೆ.
ಸಾಮಾನ್ಯ ಜನರಿಂದ ಸಂಗ್ರಹಿಸಲಾದ ಹಣವನ್ನು ಕಾನೂನುಬಾಹಿರವಾಗಿ ಪರಿವರ್ತಿಸಿ ರೋಸ್ ವ್ಯಾಲಿ ಸಮೂಹದ ವಿವಿಧ ಕಂಪೆನಿಗಳ ಹೆಸರಿನಲ್ಲಿ ಪಶ್ಚಿಮಬಂಗಾಳ, ಒಡಿಶಾ, ತ್ರಿಪುರಾ, ಅಸ್ಸಾಂ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಇತರ ರಾಜ್ಯಗಳಲ್ಲಿ ಹಲವು ಆಸ್ತಿಗಳನ್ನು ಖರೀದಿಸಿರುವುದನ್ನು ಪಿಎಂಎಲ್ಎ (ಕಾನೂನು ಬಾಹಿರ ಹಣ ವರ್ಗಾವಣೆ ಕಾಯ್ದೆ) ಅಡಿಯಲ್ಲಿ ನಡೆದ ತನಿಖೆ ಬಹಿರಂಗಗೊಳಿಸಿದೆ ಎಂದು ಹೇಳಿಕೆ ತಿಳಿಸಿದೆ. ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಔಪಚಾರಿಕ ಆದೇಶವನ್ನು ಹೊಸದಿಲ್ಲಿ ತೀರ್ಪು ಪ್ರಾಧಿಕಾರ (ಪಿಎಂಎಲ್ಎ) ದೃಢಪಡಿಸಿದೆ.
ಜಾರಿ ನಿರ್ದೇಶನಾಲಯ ರೋಸ್ ವ್ಯಾಲಿ ಸಮೂಹದ ಕಂಪೆನಿಗಳು ಹಾಗೂ ಅದರ ನಿರ್ದೇಶಕರ ವಿರುದ್ಧ ಪ್ರಾಸಿಕ್ಯೂಷನ್ ದೂರನ್ನು ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ಸಲ್ಲಿಸಿದೆ. ಪಿಎಂಎಲ್ಎ ಅಡಿಯಲ್ಲಿ ಪಶ್ಚಿಮಬಂಗಾಳ, ತ್ರಿಪುರಾ ಹಾಗೂ ಒಡಿಶಾದಲ್ಲಿರುವ ರೋಸ್ ವ್ಯಾಲಿ ಕಂಪೆನಿ ಸಮೂಹಗಳ ಸೊತ್ತನ್ನು ವಶಕ್ಕೆ ತೆಗೆದುಕೊಳ್ಳುವ ವಿಶೇಷ ಪ್ರಯತ್ನದ ಫಲವಾಗಿ 47 ಕೋಟಿ ರೂಪಾಯಿಯ 412 ಚರ ಸೊತ್ತು ಹಾಗೂ 257 ಕೋಟಿ ರೂಪಾಯಿಯ 426 ಸ್ಥಿರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.







