ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲಿನ ನಿರ್ಬಂಧ ಮೇ ಅಂತ್ಯದವರೆಗೆ ವಿಸ್ತರಣೆ

ಹೊಸದಿಲ್ಲಿ, ಎ.30: ಕೊರೋನ ಸೋಂಕು ಪ್ರಕರಣ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಸುತ್ತೋಲೆ ಹೊರಡಿಸಿದೆ.
ಈ ಹಿಂದೆ ವಿಧಿಸಿದ್ದ ನಿರ್ಬಂಧ ಎ.30ಕ್ಕೆ ಕೊನೆಯಾಗಬೇಕಿತ್ತು. ಅದನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ಆದರೆ ಸಂಬಂಧಿತ ಪ್ರಾಧಿಕಾರದ ಸೂಚನೆ ಮೇರೆಗೆ ಆಯ್ದ ಮಾರ್ಗಗಳಲ್ಲಿ ಅಂತರಾಷ್ಟ್ರೀಯ ವಿಮಾನಯಾನಗಳಿಗೆ ಅವಕಾಶ ನೀಡಬಹುದು. ವಿಮಾನಯಾನ ನಿಯಂತ್ರಣ ಪ್ರಾಧಿಕಾರ ವಿಶೇಷವಾಗಿ ಅನುಮತಿಸಿದ ಅಂತರಾಷ್ಟ್ರೀಯ ಸರಕು ವಿಮಾನಗಳ ಸಂಚಾರಕ್ಕೆ ಅನ್ವಯಿಸುವುದಿಲ್ಲ ಎಂದು ಡಿಜಿಸಿಎ ಹೇಳಿದೆ.
ಕೊರೋನ ಸೋಂಕಿನಿಂದಾಗಿ ಕಳೆದ ವರ್ಷದ ಮಾರ್ಚ್ 23ರಿಂದ ಅಂತರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಭಾರತ ಸರಕಾರ ನಿಬರ್ಂಧ ವಿಧಿಸಿದೆ. ಆದರೆ ಕಳೆದ ವರ್ಷದ ಮೇ ತಿಂಗಳಿನಿಂದ ವಂದೇ ಭಾರತ ಯೋಜನೆಯಡಿ ವಿಶೇಷ ಅಂತರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ದಿಲ್ಲಿಯಲ್ಲಿ ಕೊರೋನ ಸೋಂಕು ತೀವ್ರಗತಿಯಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ, ಕೆನಡಾ, ಯುಎಇ ಮತ್ತು ಬ್ರಿಟನ್ ಭಾರತಕ್ಕೆ ವಿಮಾನ ಸಂಚಾರವನ್ನು ನಿರ್ಬಂಧಿಸಿದೆ.





