"ದ್ವೇಷ ಭಾಷಣ ವಿಡಿಯೋ ಪ್ರಸಾರ ಮಾಡಿದ ಪತ್ರಕರ್ತ ಕೂಡಾ ಅಪರಾಧದಲ್ಲಿ ಭಾಗಿದಾರನಾಗುತ್ತಾನೆಯೇ?"
ಪಂಜಾಬ್-ಹರ್ಯಾಣ ಸರಕಾರಗಳಿಗೆ ಕೋರ್ಟ್ ಪ್ರಶ್ನೆ

ಹೊಸದಿಲ್ಲಿ,ಎ.30: ಯಾವುದೇ ವ್ಯಕ್ತಿಯ ದ್ವೇಷಭಾಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತನೊಬ್ಬ ಅಪ್ಲೋಡ್ ಮಾಡಿದಲ್ಲಿ, ಆತನನ್ನು ಕೂಡಾ ಈ ಅಪರಾಧದಲ್ಲಿ ಭಾಗೀದಾರನೆಂದು ಪರಿಗಣಿಸಬೇಕಾಗುತ್ತದೆಯೇ ಎಂದು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಉಭಯ ರಾಜ್ಯಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ದ್ವೇಷ ಭಾಷಣ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯವಾದಿ ಅಮಿತ್ ಘಾಯ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ಆಲಿಕೆ ನಡೆಸಿದ ಸಂದರ್ಭ ನ್ಯಾಯಮೂರ್ತಿ ಅರವಿಂದ ಸಿಂಗ್ ಸಾಂಘ್ವಾನ್ ಅವರಿಗೆ ಈ ಪ್ರಶ್ನೆಯನ್ನು ಎತ್ತಿದೆ.
ನಿಹಾಂಗ್ ಸಿಖ್ಖ್ ಸಮುದಾಯದ ವಿರುದ್ಧ ತಾನು ಮಾಡಿದ್ದೆನ್ನಲಾದ ನಿಂದನಾತ್ಮಕ ಭಾಷಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದ ಪತ್ರಕರ್ತನನ್ನು ಕೂಡಾ ಅಪರಾಧದಲ್ಲಿ ಭಾಗೀದಾರನೆಂದು ಪರಿಗಣಿಸಬೇಕೆಂದು ಘಾಯ್ ನ್ಯಾಯಾಲಯವನ್ನು ಆಗ್ರಹಿಸಿದ್ದರು.
ಘಾಯ್ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಅರವಿಂದ್ ಸಿಂಗ್ ಸಾಂಘ್ವಾನ್ ಅವರು ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಪತ್ರಿಕೆಗಳು ಜನಸಾಮಾನ್ಯರಿಗೆ ಹಾಗೂ ಸರಕಾರಕ್ಕೆ ನೆರವಾಗುತ್ತಿರುವುದನ್ನು ಶ್ಲಾಘಿಸಿದರು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳು ಕೂಡಾ ತಮಗೆ ತುರ್ತು ಅಗತ್ಯವಿರುವ ನಾಗರಿಕರಿಗೆಸ್ಪಂದಿಸುವಂತಹ ಮತ್ತು ತಮ್ಮ ಪರಿಚಯದ ಅಥವಾ ಪರಿಚಯವಿಲ್ಲದೆ ಇರುವ ಪ್ರಜೆಗಳಿಗೆ ನೆರವಾಗುವ ಮಹಾನ್ ಕೆಲಸವನ್ನು ಮಾಡುತ್ತಿವೆ.
ಅದಾಗ್ಯೂ ಇದಕ್ಕೆ ಅಪವಾದವೆಂಬಂತೆ , ಅತ್ಯಂತ ಕಡಿಮೆ ಶೇಕಡವಾರು ಪ್ರಮಾಣದ ಲ್ಲಿ ಕೆಲವು ಮಾಧ್ಯಮಗಳು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಕಾರಾತ್ಮಕವಾಗಿ ದುಡಿಯುವ ಹೊಣೆಗಾರಿಕೆಯನ್ನು ಹೊಂದಿಲ್ಲ. ಬದಲಿಗೆ ದ್ವೇಷ ಭಾಷಣಗಳು,ಪ್ರಚೋದನಕಾರಿ ವರದಿಗಳನ್ನು ಉತ್ತೇಜಿಸುತ್ತವೆ ಮತ್ತು ಕೋಲಾಹಲಕಾರಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ನ್ಯಾಯಾಲಯ ವಿಷಾದಿಸಿತು.
ವಿವಾದಾತ್ಮಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಪತ್ರಕರ್ತನ ವಿಚಾರಣೆ ನಡೆಸುವಂತೆಯೂ ನ್ಯಾಯಾಲಯವು, ಪಂಜಾಬ್ನ ತನಿಖಾ ಸಂಸ್ಥೆಯ ನಿರ್ದೇಶಕ ಮತ್ತು ಹೆಚ್ಚುವರಿ ನಿರ್ದೇಶಕರಿಗೆ ಸೂಚಿಸಿತು.
ಸಾಮಾಜಿಕ ಜಾಲತಾಣ ಅಥವಾ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವಿವಾದಿತ ಭಾಷಣ ದ ವಿಡಿಯೋವನ್ನು ಅಪ್ಲೋಡ್ ಮಾಡಿರುವುದು ಅಸಾಮರಸ್ಯ ಅಥವಾ ದ್ವೇಷದ ಭಾವನೆಗೆ ಪ್ರಚೋದನೆ ನೀಡಿದ ಅಪರಾಧವೆನಿಸುವುದೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚಿಸಿತು.







