ಮುಂಬೈ: ಕೋವಿಡ್ ಪಾಸಿಟಿವಿಟಿ ದರ ಶೇ.10ಕ್ಕೆ ಕುಸಿತ

ಮುಂಬೈ,ಎ.30: ಕಳೆದ ಕೆಲವು ವಾರಗಳಿಂದ ಕೊರೋನ ಎರಡನೆ ಅಲೆಯ ಅಟ್ಟಹಾಸದಿಂದ ತತ್ತರಿಸಿರುವ ಮುಂಬೈಗೆ ತುಸು ಭರವಸೆಯ ಸಂಕೇತವೆಂಬಂತೆ, ಕೋವಿಡ್-19 ಪಾಸಿಟಿವಿಟಿ ದರವು ಶೇ.10ಕ್ಕೆ ಕುಸಿದಿದೆ ಎಂದು ಮುನ್ಸಿಪಲ್ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಶುಕ್ರವಾರ ತಿಳಿಸಿದ್ದಾರೆ.
ಮುಂಬೈನಲ್ಲಿ ಎಪ್ರಿಲ್ 29ರಂದು ಸೋಂಕಿನ ಪರೀಕ್ಷೆಗೊಳಗಾದ 43,525 ಮಂದಿಯ ಪೈಕಿ 4328 ಮಂದಿಯಲ್ಲಿ ಕೊರೋನ ದೃಢಪಟ್ಟಿದ್ದು, ಪಾಸಿಟಿವಿಟಿ ದರವು ಶೇ.9.94 ಆಗಿತ್ತೆಂದು ಚಾಹಲ್ ತಿಳಿಸಿದ್ದಾರೆ.
ಪರೀಕ್ಷಿಸಲಾದ ಮಾದರಿಗಳ ಪೈಕಿ ಕೋವಿಡ್-19 ಸೋಂಕು ದೃಢಪಟ್ಟ ಮಾದರಿಗಳ ಪ್ರಮಾಣವನ್ನು ಆಧರಿಸಿ ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ಅನ್ನು ನಿರ್ಧರಿಸಲಾಗುತ್ತದೆ.
ಸುಮಾರು 44 ಸಾವಿರ ಟೆಸ್ಟ್ಗಳೊಂದಿಗೆ ನಮ್ಮ (ಮುಂಬೈ) ಪಾಸಿಟಿವಿ ದರವು ಏಕ ಅಂಕಿಗೆ ಇಳಿದಿದೆ. ಪ್ರಾಯಶಃ ಮುಂಬೈ ಈಗ ಅತ್ಯಧಿಕ ಪರೀಕ್ಷಾ ತಪಾಸಣೆಯೊಂದಿಗೆ, ಏಕ ಅಂಕಿಯ ಪಾಸಿಟಿವಿಟಿ ದರ ಇರುವ ಭಾರತದ ಏಕೈಕ ನಗರವೆಂದು ಅವರು ಹೇಳಿದರು.
ಎಪ್ರಿಲ್ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ ಕೋವಿಡ್-19 ಪಾಸಿಟಿವಿಟಿ ದರ (ಟಿಪಿಆರ್) ಶೇ.20.85 ಆಗಿತ್ತು ಎಂದು ಚಾಹಲ್ ಅಂಕಿಅಂಶಗಳೊಂದಿಗೆ ವಿವರಿಸಿದ್ದಾರೆ.
ಮುಂಬೈನಲ್ಲಿ ಗರಿಷ್ಠ ಕೋವಿಡ್ ಪಾಸಿಟಿವಿಟಿ ಪ್ರಮಾಣವು ಎಪ್ರಿಲ್ 4ರಂದು ವರದಿಯಾಗಿದ್ದು, ಶೇ.27.94 ಆಗಿತ್ತು. ಆ ದಿನ 51,313 ಮಾದರಿಗಳನ್ನು ಪರೀಕ್ಷಿಸಲಾಗಿದ್ದು 11,573 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.







