ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಕೋವಿಡ್ ರಿಲೀಫ್ ಟಾಸ್ಕ್ ಫೋರ್ಸ್ ಪ್ರಾರಂಭ
ಬೆಂಗಳೂರು, ಎ.30: ರಾಜ್ಯಾದ್ಯಂತ ಕೋವಿಡ್ ಎರಡನೆ ಅಲೆಯು ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‍ನ ರಾಜ್ಯ ಘಟಕವು ತನ್ನ ಅಂಗ ಸಂಸ್ಥೆಗಳಾದ ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್.ಆರ್.ಎಸ್.), ಎಸ್.ಐ.ಓ., ಸಾಲಿಡಾರಿಟಿ ಯೂತ್ ಮೂವ್‍ಮೆಂಟ್, ಡಾಕ್ಟರ್ಸ್ ಫಾರ್ ಹುಮ್ಯಾನಿಟಿ ಹಾಗೂ ಫಾರ್ವರ್ಡ್ ಟ್ರಸ್ಟ್- ಇವುಗಳ ಸಹಯೋಗದೊಂದಿಗೆ ಕೋವಿಡ್ ರಿಲೀಫ್ ಟಾಸ್ಕ್ ಫೋರ್ಸ್ ಪ್ರಾರಂಭಿಸಿದೆ.
ಈ ಟಾಸ್ಕ್ ಫೋರ್ಸ್ ನಲ್ಲಿ ರಾಜ್ಯದ ವಿವಿಧ ಭಾಗಗಳ ಸುಮಾರು 1500ಕ್ಕಿಂತಲೂ ಅಧಿಕ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಟಾಸ್ಕ್ ಫೋರ್ಸ್‍ನಲ್ಲಿ ಮೆಡಿಕಲ್ ಎಮರ್ಜೆನ್ಸಿ ಫೋರ್ಸ್, ರಿಲೀಫ್ ವರ್ಕ್ ಫೋರ್ಸ್ ಹಾಗೂ ವಾರ್‍ರೂಮ್ ವರ್ಕ್ ಫೋರ್ಸ್‍ಗಳೆಂಬ 3 ವಿಭಾಗಗಳಿದ್ದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೋವಿಡ್ ರಿಲೀಫ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ಅಕ್ಬರ್ ಅಲಿ ತಿಳಿಸಿದ್ದಾರೆ.
ಮೆಡಿಕಲ್ ಎಮರ್ಜೆನ್ಸಿ ತಂಡವು ಕೋವಿಡ್ ಸೆಂಟರ್ ನಿರ್ವಹಣೆ, ಆಕ್ಸಿಜನ್ ಪೂರೈಕೆ, ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ರಿಲೀಫ್ ವರ್ಕ್‍ಫೋರ್ಸ್ ತಂಡವು ಕೋವಿಡ್ ವ್ಯಾಕ್ಸಿನ್ ಪಡೆಯುವ ಬಗ್ಗೆ ಜಾಗೃತಿ, ಕಮ್ಯೂನಿಟಿ ಕಿಚನ್ ವ್ಯವಸ್ಥೆ, ಕೋವಿಡ್‍ನಿಂದ ಮೃತರಾದ ವ್ಯಕ್ತಿಗಳ ಗೌರವಯುತ ಅಂತ್ಯ ಸಂಸ್ಕಾರ ಇತ್ಯಾದಿ ಕೆಲಸಗಳನ್ನು ಹಾಗೂ ವಾರ್ ರೂಮ್ ವರ್ಕ್‍ಫೋರ್ಸ್ ವಿಭಾಗವು ಅಧಿಕೃತ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಲಭ್ಯತೆಯ ಬಗ್ಗೆ, ಕೌನ್ಸಿಲಿಂಗ್ ಇತ್ಯಾದಿ ವಿವರಗಳನ್ನು ಸಂಬಂಧಪಟ್ಟವರಿಗೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಟಾಸ್ಕ್ ಫೋರ್ಸ್‍ನ ಸ್ವಯಂಸೇವಕರು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಯ ಮೂಲಕ ಅನೇಕರಿಗೆ ಬೆಡ್‍ಬುಕಿಂಗ್‍ನ ಮಾಹಿತಿ, ಆಕ್ಸಿಜನ್ ಪೂರೈಕೆಯ ಮಾಹಿತಿ, ಕೌನ್ಸಿಲಿಂಗ್ ಹಾಗೂ ಆ್ಯಂಬುಲೆನ್ಸ್ ಗಳ ಲಭ್ಯತೆಯ ಬಗ್ಗೆ ಕೋವಿಡ್ ಪೀಡಿತರಿಗೆ ಮಾಹಿತಿ ನೀಡುತ್ತಿದೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಈ ಸಹಾಯವಾಣಿಯು ಈಗಾಗಲೇ ಸಾವಿರಕ್ಕಿಂತಲೂ ಅಧಿಕ ಜನರಿಗೆ ಮಾಹಿತಿಯನ್ನು ನೀಡಿದೆ ಎಂದು ಅಕ್ಬರ್ ಅಲಿ ತಿಳಿಸಿದ್ದಾರೆ.
ಟಾಸ್‍ಫೋರ್ಸ್ ವತಿಯಿಂದ ಈಗಾಗಲೇ ಬೆಂಗಳೂರಿನಲ್ಲಿ 'ಕಮ್ಯೂನಿಟಿ ಕಿಚನ್'ನ್ನು ಪ್ರಾರಂಭಿಸಿ ಚಿತಾಗಾರ ಹಾಗೂ ಖಬರಸ್ತಾನಗಳ ಸಿಬ್ಬಂದಿಗಳಿಗೆ, ಆ್ಯಂಬುಲೆನ್ಸ್ ಚಾಲಕರಿಗೆ ಹಾಗೂ ವಲಸೆ ಕಾರ್ಮಿಕರು ಸೇರಿದಂತೆ ಅರ್ಹರಿಗೆ ಆಹಾರ ಮತ್ತು ನೀರನ್ನು ಪೂರೈಸುವ ವ್ಯವಸ್ಥೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಸಮಾಜ ಸೇವಾ ಘಟಕವು ಕಳೆದ ವರ್ಷ 10 ಲಕ್ಷಕ್ಕಿಂತಲೂ ಅಧಿಕ ರೇಷನ್ ಕಿಟ್‍ಗಳನ್ನು ಅರ್ಹರಿಗೆ ಪೂರೈಕೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ವೈದ್ಯಕೀಯ ಸೇವೆ, ನಿರ್ಗತಿಕರಿಗೆ ಮನೆ ನಿರ್ಮಾಣ, ಸ್ಚಚ್ಛತಾಅಭಿಯಾನ, ರಕ್ತದಾನ ಇತ್ಯಾದಿ ಜನೋಪಯೋಗಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಅಕ್ಬರ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







