ಉತ್ಪಾದಕರು ಕೊರೋನ ಲಸಿಕೆಯ ದರ ನಿರ್ಧರಿಸುವಂತಿಲ್ಲ: ಸುಪ್ರೀಂಕೋರ್ಟ್

ಹೊಸದಿಲ್ಲಿ, ಎ.30: ಕೊರೋನ ಸೋಂಕಿನ ವಿರುದ್ಧದ ಲಸಿಕೆಗೆ ವಿಭಿನ್ನ ದರ ನಿಗದಿಯಾಗಿರುವ ವಿಷಯದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಲಸಿಕೆಯ ದರವನ್ನು ಉತ್ಪಾದಕರು ನಿಗದಿಗೊಳಿಸಲು ಬಿಡಬಾರದು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಬೆಲೆ ವ್ಯತ್ಯಾಸ 40,000 ಕೋಟಿ ರೂ.ಗಳಷ್ಟಾಗುತ್ತದೆ. ಬೆಲೆ ವ್ಯತ್ಯಾಸಕ್ಕೆ ಕಾರಣಗಳೇ ಇಲ್ಲ. ಇದಕ್ಕೆ ದೇಶ ಯಾಕೆ ಬೆಲೆತೆರಬೇಕು. ನೀವು ಲಸಿಕೆ ಖರೀದಿಸಬೇಕು ಎಂದು ನಾವು ಹೇಳುತ್ತಿಲ್ಲ. ಆದರೆ ಈ ಬಗ್ಗೆ ನೀವು ಗಮನ ಹರಿಸಬೇಕಾಗಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ನಾಗೇಶ್ವರ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಹೇಳಿದೆ.
ಉತ್ಪಾದಕರು ಸಾಮ್ಯತೆಯನ್ನು ಹೇಗೆ ನಿರ್ಧರಿಸುತ್ತಾರೆ? ಲಸಿಕೆ ಉತ್ಪಾದನೆಗೆ ಹೆಚ್ಚುವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಿಮ್ಮ ಅಧಿಕಾರವನ್ನು ಬಳಸಿಕೊಳ್ಳಿ. ಲಸಿಕೆಯ ಸಮಾನ ಹಂಚಿಕೆ ಸಾಧ್ಯವಾಗಬೇಕಿದ್ದರೆ ನೀವೇ ಯಾಕೆ ಎಲ್ಲಾ ಲಸಿಕೆಗಳನ್ನೂ ಖರೀದಿಸಿ ವಿತರಿಸಬಾರದು ಎಂದು ನ್ಯಾಯಪೀಠ ಕೇಂದ್ರ ಸರಕಾರವನ್ನು ಪ್ರಶ್ನಿಸಿತು.
ಲಸಿಕೆಯ ದರ ನಿಗದಿ ಗಂಭೀರ ಸಮಸ್ಯೆಯಾಗಿದೆ. 50% ಲಸಿಕೆಯನ್ನು ಮುಂಚೂಣಿ ಕಾರ್ಯಕರ್ತರಿಗೆ ಮತ್ತು 45 ವರ್ಷ ಮೀರಿದವರಿಗೆ ಉಚಿತವಾಗಿ ನೀಡಲಾಗುತ್ತದೆ. ಉಳಿದ ಲಸಿಕೆಯನ್ನು 18 ವರ್ಷ ಮೀರಿದವರಿಗೆ ನೀಡಲಾಗುತ್ತದೆ. ಈ ವಿಭಾಗದಲ್ಲಿ ಸುಮಾರು 59 ಕೋಟಿ ಜನರಿದ್ದು ಇದರಲ್ಲಿ ಬರುವ ಬಡವರು ಮತ್ತು ದುರ್ಬಲ ವರ್ಗದವರು ಲಸಿಕೆ ಖರೀದಿಸಲು ಹಣ ಎಲ್ಲಿಂದ ತರಬೇಕು? ಖಾಸಗಿ ಕ್ಷೇತ್ರದ ಮಾದರಿ ಇಲ್ಲಿ ಸೂಕ್ತವಲ್ಲ. ಸ್ವಾತಂತ್ರ್ಯ ದೊರೆತ ಕಾಲದಿಂದಲೂ ಅನುಸರಿಸುತ್ತಿರುವ ರಾಷ್ಟ್ರೀಯ ಲಸಿಕಾ ಮಾದರಿಯನ್ನು ಇಲ್ಲಿಯೂ ಅನುಸರಿಸಬೇಕು ಎಂದು ಸೂಚಿಸಿತು.







