4,50,000 ರೆಮ್ಡೆಸಿವಿರ್ ಲಸಿಕೆ ಆಮದಿಗೆ ನಿರ್ಧಾರ : ಕೇಂದ್ರ ಸರಕಾರ

ಹೊಸದಿಲ್ಲಿ, ಎ.30: ಕೊರೋನ ವೈರಸ್ ನ ಎರಡನೇ ಅಲೆ ತೀವ್ರಗತಿಯಲ್ಲಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ರೆಮ್ಡಿಸಿವಿರ್ನ 4,50,000 ಶೀಷೆಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು ಇದರಲ್ಲಿ 75,000 ಶೀಷೆಯ ಪ್ರಥಮ ಕಂತು ಶುಕ್ರವಾರ ತಲುಪಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹೇಳಿದೆ.
ಭಾರತ ಸರಕಾರದ ಅಧೀನದ ಎಚ್ಎಲ್ಎಲ್ ಲೈಫ್ಕೇರ್ ಸಂಸ್ಥೆ ಅಮೆರಿಕದ ಔಷಧ ಉತ್ಪಾದನಾ ಸಂಸ್ಥೆ ಜಿಲೀಡ್ ಸೈಯನ್ಸಸ್ ಮತ್ತು ಈಜಿಪ್ಟ್ನ ಔಷಧ ಉತ್ಪಾದನಾ ಸಂಸ್ಥೆ ಇವಾ ಫಾರ್ಮಾದಿಂದ 4,50,000 ರೆಮ್ಡೆಸಿವಿರ್ ಲಸಿಕೆಯ ಶೀಷೆಗೆ ಕಾರ್ಯಾದೇಶ(ಆರ್ಡರ್) ಸಲ್ಲಿಸಿದೆ.
ಜಿಲೀಡ್ ಸಂಸ್ಥೆ ಮುಂದಿನ ಒಂದೆರಡು ದಿನದಲ್ಲಿ 1,00,000ದಷ್ಟು ಲಸಿಕೆ ಮತ್ತು ಮೇ 15ರೊಳಗೆ ಮತ್ತೆ 1,00,000 ಲಸಿಕೆ ಪೂರೈಸಲಿದೆ. ಇವಾ ಸಂಸ್ಥೆ ಪ್ರತೀ 15 ದಿನಕ್ಕೊಮ್ಮೆ 10,000 ಲಸಿಕೆಯಂತೆ ಜುಲೈಯೊಳಗೆ ಲಸಿಕೆ ಪೂರೈಸಲಿದೆ. ದೇಶದಲ್ಲಿ ರೆಮ್ಡೆಸಿವಿರ್ ಲಸಿಕೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ದೇಶದಲ್ಲಿ ರೆಮ್ಡೆಸಿವಿರ್ ಉತ್ಪಾದಿಸಲು ಲೈಸೆನ್ಸ್ ಪಡೆದಿರುವ 7 ಸಂಸ್ಥೆಗಳು ಎಪ್ರಿಲ್ 27ರಿಂದ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 1.03 ಕೋಟಿ ಲಸಿಕೆಗೆ ಹೆಚ್ಚಿಸಿದೆ(38 ಲಕ್ಷದಿಂದ).
ಎಪ್ರಿಲ್ 21ರಿಂದ 28ರವರೆಗಿನ 7 ದಿನಗಳಲ್ಲಿ 13.73 ಶೀಷೆಯಷ್ಟು ರೆಮ್ಡೆಸಿವಿರ್ ಲಸಿಕೆ ಉತ್ಪಾದನೆಯಾಗಿದೆ. ಈ ಮಧ್ಯೆ ದೈನಂದಿನ ಪೂರೈಕೆಯ ಪ್ರಮಾಣ ಎಪ್ರಿಲ್ 11ರಂದು 67,900 ಶೀಷೆಯಷ್ಟಿದ್ದರೆ ಎಪ್ರಿಲ್ 28ಕ್ಕೆ 2.09 ಲಕ್ಷ ಶೀಷೆಗೆ ಹೆಚ್ಚಿದೆ. ರೆಮ್ಡೆಸಿವರ್ ಲಸಿಕೆಯ ಸುಗಮ ಸಾಗಾಟಕ್ಕೆ ಅವಕಾಶ ನೀಡುವಂತೆ ರಾಜ್ಯಗಳಿಗೆ ಸಲಹಾ ಪತ್ರ ರವಾನಿಸಲಾಗಿದೆ. ದೇಶದಲ್ಲಿ ರೆಮ್ಡೆಸಿವರ್ ಲಸಿಕೆಯ ಲಭ್ಯತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಲಸಿಕೆಯ ರಫ್ತನ್ನು ನಿಷೇಧಿಸಲಾಗಿದೆ. ಲಸಿಕೆ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಲಭಿಸಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು ಪರಿಷ್ಕೃತ ದರಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪ್ರತೀ ಶೀಷೆಯ ಬೆಲೆಯನ್ನು 3,500 ರೂ.ಗಿಂತಲೂ ಕಡಿಮೆ ಎಂದು ನಿಗದಿಗೊಳಿಸಿದೆ.
ದೇಶದಲ್ಲಿ ರೆಮ್ಡೆಸಿವಿರ್ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಲಸಿಕೆಯ ಉತ್ಪಾದನೆಯಲ್ಲಿ ಬಳಸುವ ಸಾಧನಗಳ ಮೇಲಿನ ಅಬಕಾರಿ ಸುಂಕವನ್ನು ಈ ವರ್ಷದ ಅಕ್ಟೋಬರ್ 31 ರವರೆಗೆ ಮನ್ನಾ ಮಾಡಿದೆ. ವಯಸ್ಕ ಕೋವಿಡ್ ರೋಗಿಗಳ ಔಷಧೋಪಚಾರ ಮತ್ತು ನಿರ್ವಹಣೆಯ ಕುರಿತಾದ ರಾಷ್ಟ್ರೀಯ ಚಿಕಿತ್ಸಾ ನಿಯಮಾವಳಿಯನ್ನು ಎಪ್ರಿಲ್ 22ರಂದು ಪರಿಷ್ಕರಿಸಲಾಗಿದ್ದು ಇದರಿಂದ ಔಷಧಗಳ ಕಾನೂನುಬದ್ಧ ಬಳಕೆಗೆ ಅನುಕೂಲವಾಗಲಿದೆ ಎಂದು ಇಲಾಖೆ ಹೇಳಿದೆ.







