ಕೋವಿಡ್ ಪರೀಕ್ಷೆ ಡಾಟಾ ಒದಗಿಸಲು ಒತ್ತಾಯ : ಪ್ರಧಾನಿ ಮೋದಿಗೆ 400ಕ್ಕೂ ಹೆಚ್ಚು ವಿಜ್ಞಾನಿಗಳ ಬಹಿರಂಗ ಮನವಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕಕ್ಕೆ ಸೂಕ್ತವಾಗಿ ಸ್ಪಂದಿಸಲು ಅನುವಾಗುವಂತೆ ದೇಶದಲ್ಲಿ ಕೋವಿಡ್-19 ಪರೀಕ್ಷೆ ಮತ್ತು ಕ್ಲಿನಿಕಲ್ ದತ್ತಾಂಶವನ್ನು ವಿಜ್ಞಾನಿಗಳಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ದೇಶದ ವಿವಿಧ ಸಂಶೋಧನಾ ಸಂಸ್ಥೆ ಮತ್ತು ಬೋಧನಾ ಸಂಸ್ಥೆಗಳ 400ಕ್ಕೂ ಹೆಚ್ಚು ವಿಜ್ಞಾನಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಮನವಿ ಮಾಡಿದ್ದಾರೆ ಎಂದು timesofindia ವರದಿ ಮಾಡಿದೆ.
"ಈ ಸಾಂಕ್ರಾಮಿಕದ ದತ್ತಾಂಶಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮತ್ತು ವೈಜ್ಞಾನಿಕ ಸಮುದಾಯಕ್ಕೆ ಇದನ್ನು ನಿಯತವಾಗಿ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಈ ಸೋಂಕು ಹರಡುವಿಕೆಯನ್ನು ಸಮರ್ಪಕವಾಗಿ ನಿಭಾಯಿಸುವುದು ಅಸಾಧ್ಯವಾಗಿದೆ" ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಆತ್ಮನಿರ್ಭರ ಭಾರತ ನೀತಿಯು ವೈಜ್ಞಾನಿಕ ಸಾಧನ- ಸಲಕರಣೆಗಳನ್ನು ಮತ್ತು ಉಪಕರಣಗಳನ್ನು ಆಮದು ಮಾಡಿಕೊಳ್ಳುವುದು ತೀರಾ ಕಷ್ಟಸಾಧ್ಯವಾಗಿಸಿದೆ ಮತ್ತು ಇವುಗಳನ್ನು ಆಮದು ಮಾಡಿಕೊಳ್ಳಲು ಸಚಿವಾಲಯಗಳ ಕಾರ್ಯದರ್ಶಿಗಳು ಅಥವಾ ಇಲಾಖಾ ಕಾರ್ಯದರ್ಶಿಗಳ ಅನುಮೋದನೆ ಪಡೆಯಬೇಕಿರುವುದರಿಂದ ಈ ಪ್ರಕ್ರಿಯೆಗೆ ತೀರಾ ಸಮಯ ತಗುಲುವಂತಾಗಿದೆ. ಇದರಿಂದಾಗಿ ಪರೀಕ್ಷೆ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಹೊಸ ಪರೀಕ್ಷಾ ಪ್ಲಾಟ್ಫಾರಂಗಳನ್ನು ಅಭಿವೃದ್ಧಿಪಡಿಸುವುದು ಅಸಾಧ್ಯವಾಗಿದೆ. ಇದರ ಜತೆಗೆ ಕ್ಷಿಪ್ರವಾಗಿ ಹಾಗೂ ನಿಖರವಾಗಿ ವೈರಸ್ ಹರಡುವಿಕೆಯ ಸರ್ವೇಕ್ಷಣೆ ಕೈಗೊಳ್ಳಲು ವೈರಾಣುಗಳ ಜೆನೋಮ್ಗಳ ಸೀಕ್ವೆನ್ಸ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಭಾರತ ಭವಿಷ್ಯದಲ್ಲಿ ಆತ್ಮನಿರ್ಭರವಾಗಬೇಕಿದ್ದರೆ ಸರ್ಕಾರದಿಂದ ಸೂಕ್ತ ಉತ್ತೇಜನ ಹಾಗೂ ಬೆಂಬಲ ಅಗತ್ಯ. ಇಂಥ ಸಂಕಷ್ಟದ ಸಂದರ್ಭದಲ್ಲಿ ಆತ್ಮನಿರ್ಭರ ಹೆಸರಿನಲ್ಲಿ ನಿರ್ಬಂಧ ವಿಧಿಸುವುದು ಕೋವಿಡ್-19 ನಿಭಾಯಿಸುವ ನಮ್ಮ ಸಾಮರ್ಥ್ಯಕ್ಕೆ ತಡೆಯಾಗಲಿದೆ. ಆದ್ದರಿಂದ ತಕ್ಷಣವೇ ಈ ನಿರ್ಬಂಧಗಳನ್ನು ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಕೊರೋನಾ ವೈರಸ್ನ ಹೊಸ ಪ್ರಬೇಧಗಳಿಗೆ ಕೈಗೊಂಡ ದೊಡ್ಡ ಪ್ರಮಾಣದ ಜೆನೋಮಿಕ್ ಸರ್ವೇಕ್ಷಣೆ ಬಗೆಗಿನ ದತ್ತಾಂಶಗಳನ್ನು, ಪರೀಕ್ಷೆ ಮತ್ತು ಕ್ಲಿನಿಕಲ್ ದತ್ತಾಂಶ ಮಾಹಿತಿಯನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುವಂತೆಯೂ ಕೋರಿದ್ದಾರೆ.