ಮಂಗಳೂರು: ಮನೆಯವರಿಂದಲೇ ಪೊಲೀಸರಿಗೆ ‘ಖಾಕಿ ಮಾಸ್ಕ್’ ತಯಾರಿ
10 ಸಾವಿರ ಮಾಸ್ಕ್ ಹೊಲಿಯವ ಗುರಿ

ಮಂಗಳೂರು, ಮೇ 1: ನಗರದ ಪೊಲೀಸರು ಕೊರೋನ ವಾರಿಯರ್ಸ್‌ಗಳಾಗಿ ಸಾರ್ವಜನಿಕರ ಕ್ಷೇತ್ರದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದರೆ ಅವರ ಮನೆಯವರು ಕೊರೋನ ವಾರಿಯರ್ಸ್‌ಗಳ (ಪೊಲೀಸರ) ಸುರಕ್ಷತೆಗಾಗಿ ಮಾಸ್ಕ್ ಸಿದ್ಧಪಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ‘ಖಾಕಿ’ ಮಾಸ್ಕ್‌ನ್ನು ಪೊಲೀಸರ ಮನೆಯವರು ಅಂದರೆ ಪೊಲೀಸರ ಪತ್ನಿ/ಹತ್ತಿರದ ಸಂಬಂಧಿಕರು ತಯಾರಿಸುತ್ತಿದ್ದಾರೆ.
ನಗರದ ಪೊಲೀಸ್ ಲೇನ್‌ನಲ್ಲಿರುವ ಜ್ಞಾನೋದಯ ಮಹಿಳಾ ಮಂಡಳಿಯ ಕಟ್ಟಡದಲ್ಲಿ ಮಂಡಳಿಯ ಅಧ್ಯಕ್ಷೆ ಭಾಗೀರಥಿ, ಸುಶೀಲಾ, ಸುನೀತಾ, ನೇತ್ರಾವತಿ, ಪೂರ್ಣಿಮಾ, ತನುಜಾ, ಆಶಾ, ಪೂರ್ಣಿಮಾ ಎಸ್. ಹೀಗೆ 8 ಮಂದಿ ಮಹಿಳೆಯರು 5 ದಿನಗಳಿಂದ 2,500 ಖಾಕಿ ಮಾಸ್ಕ್‌ಗಳನ್ನು ಸಿದ್ಧಪಡಿಸಿದ್ದಾರೆ.
ಗೃಹಿಣಿಯರಾಗಿದ್ದರೂ ಮನೆ ಕೆಲಸ ಮುಗಿದ ಬಳಿಕ ಬಟ್ಟೆ ಹೊಲಿಯುವುದು, ಎಂಬ್ರಾಯ್ಡರಿ ಮಾಡುತ್ತಿದ್ದರು. ಈಗ ಕೊರೋನ ಉಲ್ಬಣವಾಗು ತ್ತಿರುವ ಸಂದರ್ಭ ತಮ್ಮ ಮನೆಯವರಿಗೆ ಹಾಗೂ ಮನೆಯವರೊಂದಿಗಿರುವ ಇತರ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ತಯಾರಿಸಲು ನಿರ್ಧರಿಸಿದರು. ಈ ವಿಷಯ ತಿಳಿದ ಪೊಲೀಸ್ ಆಯುಕ್ತರು ಪ್ರೋತ್ಸಾಹ ನೀಡಿದರು.
10,000 ಮಾಸ್ಕ್ ಗುರಿ
ಮಹಿಳಾ ಮಂಡಳಿಯ ತರಬೇತಿ ಕಾರ್ಯಕ್ರಮದಲ್ಲಿ ನಾವು ಟೈಲರಿಂಗ್ ಕಲಿತುಕೊಂಡಿದ್ದೆವು. ಪ್ರತೀ ದಿನ 80 ಮಾಸ್ಕ್‌ಗಳನ್ನು ತಯಾರಿಸುತ್ತಿ ದ್ದೇವೆ. ಸದ್ಯ 2,500ರಷ್ಟು ಮಾಸ್ಕ್‌ಗಳು ಸಿದ್ಧವಾಗಿವೆ. ಒಟ್ಟು 10,000 ಮಾಸ್ಕ್ ಸಿದ್ಧಪಡಿಸಲು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಖಾಕಿ ಬಟ್ಟೆಯನ್ನು ಕೂಡ ಅವರು ಒದಗಿಸಿಕೊಡುತ್ತಿದ್ದಾರೆ. ಮಾಸ್ಕ್‌ಗೆ ಬಟ್ಟೆ ಉತ್ತಮವಾಗಿದೆ. ಹಾಗಾಗಿ ಸಿಂಗಲ್ ಲೇಯರ್ ಮಾಸ್ಕ್‌ಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಜ್ಞಾನೋದಯ ಮಹಿಳಾ ಮಂಡಳಿಯ ಅಧ್ಯಕ್ಷೆ ಭಾಗೀರಥಿ ಹೇಳಿದ್ದಾರೆ.
ಪೊಲೀಸರ ಬಗೆಗಿನ ಮಹಿಳೆಯರ ಕಾಳಜಿಯನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶ್ಲಾಘಿಸಿದ್ದಾರೆ. ಶನಿವಾರ ಮಾಸ್ಕ್ ಸಿದ್ಧಪಡಿಸುತ್ತಿದ್ದ ಮಹಿಳಾ ಮಂಡಳಿ ಕಚೇರಿಗೆ ಭೇಟಿ ನೀಡಿದ ಅವರು ಮಾಸ್ಕ್ ತಯಾರಿಕೆ ಕಾರ್ಯವನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಎಂಟು ಮಹಿಳೆಯರಿಗೆ ಗೌರವಧನ ನೀಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.
2,000 ಪೊಲೀಸರಿಗೆ ತಲಾ 5 ಮಾಸ್ಕ್
ಇದು ಪೊಲೀಸರ ಸಮವಸ್ತ್ರದ ಬಣ್ಣವನ್ನೇ ಹೊಂದಿರುವ ಮಾಸ್ಕ್. ಕಮಿಷನರೆಟ್ ವ್ಯಾಪ್ತಿಯಲ್ಲಿ 2,000 ಮಂದಿ ಪೊಲೀಸರಿದ್ದಾರೆ. ಒಬ್ಬರಿಗೆ ತಲಾ 5 ಮಾಸ್ಕ್‌ಗಳನ್ನು ಉಚಿತವಾಗಿ ನೀಡುವ ಉದ್ದೇಶವಿದ್ದು 10,000 ಮಾಸ್ಕ್ ಸಿದ್ಧಪಡಿಸಿಕೊಡಲು ಕೇಳಿಕೊಂಡಿದ್ದೇವೆ. ಅದಕ್ಕೆ ಮಹಿಳೆಯರು ಒಪ್ಪಿಕೊಂಡಿದ್ದಾರೆ. ಸಮವಸ್ತ್ರ ಬಣ್ಣದ ಮಾಸ್ಕ್‌ನಿಂದ ಪೊಲೀಸರ ಶಿಸ್ತಿಗೂ ಪೂರಕವಾಗುತ್ತದೆ. ಅಲ್ಲದೆ ಇದು ಮರುಬಳಕೆ ಮಾಡುವ (ವಾಶೇಬಲ್) ಮಾಸ್ಕ್‌ಗಳಾಗಿವೆ.
-ಎನ್.ಶಶಿಕುಮಾರ್,
ಪೊಲೀಸ್ ಆಯುಕ್ತರು, ಮಂಗಳೂರು







