ಕಾರಲ್ಲಿ ಬಂದ ಮಹಿಳೆಯರು ಉಳ್ಳಾಲ ಸೇತುವೆಯಿಂದ ನದಿಗೆ ತ್ಯಾಜ್ಯ ಎಸೆತ

ಮಂಗಳೂರು, ಮೇ 1: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಉಳ್ಳಾಲ ಸೇತುವೆಯಲ್ಲಿ ಕಾರನ್ನು ನಿಲ್ಲಿಸಿ ತ್ಯಾಜ್ಯದ ಕಟ್ಟುಗಳನ್ನು ನದಿಗೆ ಎಸೆದ ಘಟನೆ ಬೆಳಕಿಗೆ ಬಂದಿದೆ. ಕಾರನ್ನು ರಸ್ತೆಯಲ್ಲೇ ನಿಲ್ಲಿಸಲಾಗಿದ್ದು, ಅದರಿಂದ ಇಳಿದ ಇಬ್ಬರು ಮಹಿಳೆಯರು ತ್ಯಾಜ್ಯ ಎಸೆದಿದ್ದಾರೆ. ಈ ದೃಶ್ಯವನ್ನು ಹಿಂದಿನ ಕಾರಿನಲ್ಲಿದ್ದವರು ಮೊಬೈಲ್‌ನಲ್ಲೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.
ಉಳ್ಳಾಲ ಸೇತುವೆಯು ಆತ್ಮಹತ್ಯೆಯ ತಾಣವಾಗಿ ಮಾರ್ಪಟ್ಟ ಬಳಿಕ ಅರ್ಧಕೋಟಿಗೂ ಅಧಿಕ ಹಣ ಸುರಿಸಿ ಸೇತುವೆಯ ನಾಲ್ಕು ಕಡೆಗಳಲ್ಲೂ ತಂತಿ ಬೇಲಿ ಅಳವಡಿಸಲಾಗಿದೆ. ಆ ಬಳಿಕ ಆತ್ಮಹತ್ಯೆ ಪ್ರಕರಣ ಕಡಿಮೆಯಾದರೂ ಕೂಡ ತ್ಯಾಜ್ಯ ಎಸೆಯುವವರಿಗೆ ಕಡಿವಾಣ ಬಿದ್ದಿರಲಿಲ್ಲ. ಈ ಸೇತುವೆಯುದ್ದಕ್ಕೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಮಧ್ಯೆ ಕೆಲವು ಸಂಘಟನೆಗಳು ಸೇತುವೆಯುದ್ದಕ್ಕೂ ನದಿಗೆ ತ್ಯಾಜ್ಯ ಎಸೆಯದಂತೆ ಅಭಿಯಾನ ಮಾಡಿತ್ತು. ಆದರೆ, ಪರಿಸರದ ಬಗ್ಗೆ ಕಾಳಜಿ ಇಲ್ಲದವರು ಮಾಲಿನ್ಯ ಮಾಡುತ್ತಲೇ ಇದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಡಾಡುವ ವೀಡಿಯೋ ಯಾವಾಗಿನದ್ದು ಎಂದು ಸ್ಪಷ್ಟವಿಲ್ಲ. ಆದರೆ, ಕಾರಿನ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣುತ್ತಿದ್ದು, ಅದರ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





