ದಿಲ್ಲಿ ಬಾತ್ರಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ: ಮೃತರ ಸಂಖ್ಯೆ 12ಕ್ಕೇರಿಕೆ

ಹೊಸದಿಲ್ಲಿ: ದಿಲ್ಲಿಯ ಬಾತ್ರಾ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ 11:45ಕ್ಕೆ ವೈದ್ಯಕೀಯ ಆಕ್ಸಿಜನ್ ಪೂರೈಕೆಯಲ್ಲಾದ ವ್ಯತ್ಯಯದಿಂದಾಗಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ವಾರದಲ್ಲಿ ಎರಡನೇ ಬಾರಿ ನಡೆದಿರುವ ಈ ಘಟನೆಯಲ್ಲಿ ಓರ್ವ ವೈದ್ಯರೂ ಪ್ರಾಣ ಕಳೆದುಕೊಂಡಿದ್ದಾರೆ.
“ಮುಂದಿನ 24 ಗಂಟೆ ಅತ್ಯಂತ ನಿರ್ಣಾಯಕ. ಆಕ್ಸಿಜನ್ ಕೊರತೆಯಿಂದ ಇನ್ನಷ್ಟು ಸಾವು ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು'' ಎಂದು ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ.ಸುದಾಂಶು ಬಂಕಾಟ ತಿಳಿಸಿದ್ದಾರೆ.
ಆಮ್ಲಜನಕ ಸರಬರಾಜಿನಲ್ಲಿ ಇಳಿಮುಖವಾದಾಗ ಈ ಎಲ್ಲ ರೋಗಿಗಳ ಆಕ್ಸಿಜನ್ ಮಟ್ಟವು ಕುಸಿತಗೊಂಡಿತ್ತು. ಇಂತಹ ರೋಗಿಗಳು ಮತ್ತೆ ಚೇತರಿಸಿಕೊಳ್ಳುವುದು ಕಷ್ಟಕರ. ಮುಂದಿನ 24ರಿಂದ 48 ಗಂಟೆಗಳು ಅತ್ಯಂತ ಮುಖ್ಯ. ಸಾವಿನ ಸಂಖ್ಯೆ ಮತ್ತಷ್ಟು ಏರಬಹುದು, ಸದ್ಯ 220 ರೋಗಿಗಳು ಆಕ್ಸಿಜನ್ ಸಹಾಯದಲ್ಲಿದ್ದಾರೆ ಎಂದು ಡಾ.ಸುಧಾಂಶು ಎನ್ ಡಿ ಟಿವಿಗೆ ತಿಳಿಸಿದ್ದಾರೆ.
ಮೃತಪಟ್ಟಿರುವ 12 ಜನರ ಪೈಕಿ ಆರು ಮಂದಿ ಆಸ್ಪತ್ರೆಯ ಐಸಿಯುನಲ್ಲಿದ್ದರು. ಮೃತಪಟ್ಟ ವೈದ್ಯರನ್ನು ಆರ್.ಕೆ. ಹಿಂಥಾನಿ ಎಂದು ಗುರುತಿಸಲಾಗಿದೆ.ಇವರು ಬಾತ್ರ ಆಸ್ಪತ್ರೆಯ ವೈದ್ಯರಾಗಿದ್ದರು.